ಡಿ. 4ರಿಂದ ಮಲ್ಯ ಗಡಿಪಾರು ವಿಚಾರಣೆ

Update: 2017-11-20 15:39 GMT

ಲಂಡನ್, ನ. 20: ಭಾರತದಲ್ಲಿ ವಿವಿಧ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಂಚಿಸಿ ಲಂಡನ್‌ನಲ್ಲಿ ವಾಸಿಸುತ್ತಿರುವ ಮದ್ಯ ದೊರೆ ವಿಜಯ ಮಲ್ಯರ ಗಡಿಪಾರು ವಿಚಾರಣೆ ಡಿಸೆಂಬರ್ 4ರಿಂದ ಎಂಟು ದಿನಗಳ ಕಾಲ ನಡೆಯಲಿದೆ.

ಇಲ್ಲಿನ ನ್ಯಾಯಾಲಯವೊಂದು ಸೋಮವಾರ ನಡೆಸಿದ ಪ್ರಕರಣದ ಪೂರ್ವ ವಿಚಾರಣೆಯ ವೇಳೆ ಈ ದಿನಾಂಕವನ್ನು ನಿಗದಿಪಡಿಸಿದೆ.

ವಿಚಾರಣೆಗೆ ಹಾಜರಾದ ಮಲ್ಯ, ಭಾರತದಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು.

 ಈ ವರ್ಷದ ಆರಂಭದಲ್ಲಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಜಾರಿಗೊಳಿಸಿದ ಗಡಿಪಾರು ವಾರಂಟ್‌ಗೆ ಸಂಬಂಧಿಸಿ ಮಲ್ಯ ಈಗ ಜಾಮೀನಿನಲ್ಲಿದ್ದಾರೆ. ಸೋಮವಾರ, ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಅವರ ಜಾಮೀನನ್ನು ಡಿಸೆಂಬರ್ 4ರವರೆಗೆ ಮುಂದುವರಿಸಿದರು ಹಾಗೂ ಅಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದರು.

ಮಲ್ಯ ವಿರುದ್ಧ ಭಾರತ ಲಂಡನ್‌ನಲ್ಲಿ ಹೂಡಿರುವ ಗಡಿಪಾರು ಮೊಕದ್ದಮೆಯ ವಿಚಾರಣೆ ಡಿಸೆಂಬರ್ 4ರಿಂದ 14ರವರೆಗೆ ನಡೆಯಲಿದೆ. ಡಿಸೆಂಬರ್ 8ರಂದು ಕಲಾಪ ನಡೆಯುವುದಿಲ್ಲ.

ನನ್ನ ಜೀವಕ್ಕೆ ಬೆದರಿಕೆಯಿದೆ: ಮಲ್ಯ

ಭಾರತಕ್ಕೆ ತನ್ನ ಗಡಿಪಾರನ್ನು ಮುಂದೂಡುವ ಪ್ರಯತ್ನವೆಂಬಂತೆ, ಭಾರತದಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂಬುದಾಗಿ ವಿಜಯ ಮಲ್ಯ ಸೋಮವಾರ ಲಂಡನ್‌ನ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಮಲ್ಯರನ್ನು ಭಾರತಕ್ಕೆ ಕಳುಹಿಸಿದರೆ ಅವರ ಜೀವಕ್ಕೆ ಅಪಾಯವಿದೆ ಎಂಬುದಾಗಿ ಮಲ್ಯ ಪರವಾಗಿ ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ನ್ಯಾಯಾಲಯದಲ್ಲಿ ವಾದಿಸಿದ ವಕೀಲರು ಹೇಳಿದರು.

ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಅವರಿಗೆ ನೀಡಲಾಗುವ ಭದ್ರತಾ ಏರ್ಪಾಡುಗಳ ವಿವರಗಳನ್ನು ಒಳಗೊಂಡ ದಾಖಲೆಯನ್ನು ಭಾರತ ಸರಕಾರದ ಪರವಾಗಿ ಸಲ್ಲಿಸಲು ಪ್ರಾಸಿಕ್ಯೂಶನ್ ಸಿದ್ಧತೆ ನಡೆಸಿದೆ.

ಎಲ್ಲ ಆರೋಪಗಳು ಸುಳ್ಳು: ಮಲ್ಯ

ತನ್ನ ವಿರುದ್ಧ ಭಾರತ ಸರಕಾರ ಹೂಡಿರುವ ಎಲ್ಲ ಆರೋಪಗಳು ‘ಆಧಾರರಹಿತ ಹಾಗೂ ಕಪೋಲಕಲ್ಪಿತ’ ಎಂದು ವಿಜಯ ಮಲ್ಯ ಹೇಳಿದ್ದಾರೆ.

ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು ಹಾಗೂ ಡಿಸೆಂಬರ್ 4ರಂದು ಆರಂಭಗೊಳ್ಳುವ ವಿಚಾರಣೆಗೆ ಹಾಜರಾಗುವಂತೆ ಪತ್ರಕರ್ತರಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News