3 ಅಂಶಗಳ ಪ್ರಸ್ತಾಪಕ್ಕೆ ಬಾಂಗ್ಲಾ, ಮ್ಯಾನ್ಮಾರ್ ಒಪ್ಪಿಗೆ

Update: 2017-11-20 16:08 GMT

ಬೀಜಿಂಗ್, ನ. 20: ರೊಹಿಂಗ್ಯಾ ಬಿಕ್ಕಟ್ಟನ್ನು ನಿಭಾಯಿಸುವ ತನ್ನ ಮೂರು ಅಂಶಗಳ ಪ್ರಸ್ತಾಪವನ್ನು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳು ಅನುಮೋದಿಸಿವೆ ಎಂದು ಚೀನಾ ಸೋಮವಾರ ತಿಳಿಸಿದೆ.

ಆಗಸ್ಟ್ 25ರಂದು ಮ್ಯಾನ್ಮಾರ್ ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ, ಸೇನೆ ನಡೆದ ದಮನ ಕಾರ್ಯಾಚರಣೆಗೆ ಬೆದರಿ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ.

ಮ್ಯಾನ್ಮಾರ್ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದ್ದು, ಇದು ‘ಜನಾಂಗೀಯ ನಿರ್ಮೂಲನೆ’ ಎಂಬುದಾಗಿ ವಿಶ್ವಸಂಸ್ಥೆ ಬಣ್ಣಿಸಿದೆ.

ಚೀನಾ ವಿದೇಶ ಸಚಿವ ವಾಂಗ್ ಯಿ ತನ್ನ ಬಾಂಗ್ಲಾದೇಶ ಮತ್ತು ಪ್ರಸಕ್ತ ನಡೆಯುತ್ತಿರುವ ಮ್ಯಾನ್ಮಾರ್ ಪ್ರವಾಸದ ವೇಳೆ ತನ್ನ ಮೂರು ಅಂಶಗಳ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

‘‘ಅವರ ಪ್ರಸ್ತಾಪಗಳಿಗೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳೆರಡೂ ಅನುಮೋದನೆ ನೀಡಿವೆ. ಈ ಪ್ರಸ್ತಾಪಗಳು ರೊಹಿಂಗ್ಯಾ ಬಿಕ್ಕಟ್ಟನ್ನು ಪರಿಹರಿಸುವುದು ಎಂಬ ಭರವಸೆ ನನಗಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಪತ್ರಕರ್ತರಿಗೆ ಹೇಳಿದರು.

3 ಪರಿಹಾರ ಸೂತ್ರಗಳು

ಚೀನಾ ವಿದೇಶ ಸಚಿವ ವಾಂಗ್ ಯಿ ಮುಂದಿಟ್ಟ ಮೂರು ಅಂಶಗಳ ಪರಿಹಾರವೆಂದರೆ: 1)ಯುದ್ಧವಿರಾಮ ಘೋಷಣೆ, 2)ಕಾರ್ಯಸಾಧು ಪರಿಹಾರಕ್ಕಾಗಿ ದ್ವಿಪಕ್ಷೀಯ ಮಾತುಕತೆ ಮತ್ತು 3) ದೀರ್ಘಾವಧಿ ಪರಿಹಾರಕ್ಕಾಗಿ ಶ್ರಮಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News