ರಣಜಿ:ಕರ್ನಾಟಕ ಕ್ವಾರ್ಟರ್ ಫೈನಲ್ ಗೆ

Update: 2017-11-20 18:06 GMT

ಕಾನ್ಪುರ, ನ.20: ಕರ್ನಾಟಕ ಹಾಗೂ ಉತ್ತರಪ್ರದೇಶ ನಡುವಿನ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದು, ವಿನಯ್‌ಕುಮಾರ್ ಬಳಗ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯ ಡ್ರಾಗೊಂಡಿದ್ದರೂ 3 ಅಂಕ ಗಳಿಸಿದ ಕರ್ನಾಟಕ ತಂಡ ಒಟ್ಟು 26 ಅಂಕ ಗಳಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. 23 ಅಂಕ ಗಳಿಸಿರುವ ದಿಲ್ಲಿ ಎರಡನೆ ಸ್ಥಾನದಲ್ಲಿದೆ. ಉಭಯ ತಂಡಗಳು ಮೊದಲ ಇನಿಂಗ್ಸ್ ನಲ್ಲಿ ಭಾರೀ ಮುನ್ನಡೆ ಪಡೆದ ಕಾರಣ ಮೂರಂಕವನ್ನು ಬಾಚಿಕೊಂಡಿವೆ.

ಕೊನೆಯ ದಿನವಾದ ಸೋಮವಾರ ಕರ್ನಾಟಕದ ಆರಂಭಿಕ ಆಟಗಾರರಾದ ಆರ್.ಸಮರ್ಥ್ ಹಾಗೂ ಮಾಯಾಂಕ್ ಅಗರವಾಲ್ ಔಟಾಗದೆ ಶತಕ ಸಿಡಿಸಿದರು. ಈ ಇಬ್ಬರ ಸಾಹಸದಿಂದ ಕರ್ನಾಟಕ 2ನೆ ಇನಿಂಗ್ಸ್‌ನಲ್ಲಿ 59 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ 262 ರನ್ ಗಳಿಸಿತು.

ಇದಕ್ಕೆ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಉತ್ತರಪ್ರದೇಶ ತಂಡ 331 ರನ್‌ಗೆ ಆಲೌಟಾಯಿತು. ಬ್ಯಾಟಿಂಗ್ ಮುಂದುವರಿಸಿದ ರಿಂಕು ಸಿಂಗ್ ಹಾಗೂ ಉಪೇಂದ್ರ ಯಾದವ್ ದೊಡ್ಡ ಜೊತೆಯಾಟ ನಡೆಸಲು ವಿಫಲರಾದರು. ರಿಂಕು 73 ರನ್‌ಗೆ ಔಟಾದರು. ಉಪೇಂದ್ರ(ಅಜೇಯ 49) ಅವರು ಅಂಕಿತ್ ರಾಜ್‌ಪೂತ್(19) ಅವರೊಂದಿಗೆ 9ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಎಸ್.ಗೋಪಾಲ್(3-63),ರೋನಿತ್ ಮೋರೆ(2-79) ಹಾಗೂ ಕೆ.ಗೌತಮ್(2-114) ಶಿಸ್ತುಬದ್ಧ ಬೌಲಿಂಗ್ ಮಾಡಿ ಉತ್ತರಪ್ರದೇಶವನ್ನು ನಿಯಂತ್ರಿಸಿದರು. ಮೊದಲ ಇನಿಂಗ್ಸ್‌ನಲ್ಲಿ 324 ರನ್ ಮುನ್ನಡೆ ಪಡೆದ ಕರ್ನಾಟಕ ತಂಡ ಉತ್ತರಪ್ರದೇಶಕ್ಕೆ ಫಾಲೋ-ಆನ್ ಹೇರದೇ ಎರಡನೆ ಇನಿಂಗ್ಸ್ ಆರಂಭಿಸಿತು.

 ಮೊದಲ ಇನಿಂಗ್ಸ್‌ನಲ್ಲಿ 16 ರನ್‌ಗೆ ಔಟಾಗಿದ್ದ ಸಮರ್ಥ್ ಎರಡನೆ ಇನಿಂಗ್ಸ್‌ನಲ್ಲಿ ತಪ್ಪು ಪುನರಾವರ್ತಿಸದೇ ಈ ಋತುವಿನ ರಣಜಿಯಲ್ಲಿ ಮೂರನೆ ಶತಕ ಪೂರೈಸಿದರು. 183 ಎಸೆತಗಳನ್ನು ಎದುರಿಸಿದ್ದ ಸಮರ್ಥ್ 11 ಬೌಂಡರಿ, 2 ಸಿಕ್ಸರ್‌ಗಳ ಸಹಿತ 126 ರನ್ ಗಳಿಸಿದರು. ಮತ್ತೊಂದೆಡೆ ಮಾಯಾಂಕ್ ಅಗರವಾಲ್ ತಾನಾಡಿರುವ 3ನೆ ಪಂದ್ಯದಲ್ಲಿ 3ನೆ ಶತಕ(ಅಜೇಯ 133,171 ಎಸೆತ, 12 ಬೌಂಡರಿ, 2 ಸಿಕ್ಸರ್)ಸಿಡಿಸಿದರು. ಈ ಜೋಡಿ 4.5 ರನ್‌ರೇಟ್‌ನಲ್ಲಿ ರನ್ ಕಲೆ ಹಾಕಿ ಉತ್ತರಪ್ರದೇಶ ಬೌಲರ್‌ಗಳನ್ನು ಬೆಂಡೆತ್ತಿತು.

ಮೊದಲ ಇನಿಂಗ್ಸ್‌ನಲ್ಲಿ ಆಕ್ರಮಣಕಾರಿ 238 ರನ್ ಗಳಿಸಿ ಕರ್ನಾಟಕ 655 ರನ್ ಗಳಿಸಲು ನೆರವಾಗಿದ್ದ ಮನೀಷ್ ಪಾಂಡೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

►ಕರ್ನಾಟಕ ಮೊದಲ ಇನಿಂಗ್ಸ್: 186.1 ಓವರ್‌ಗಳಲ್ಲಿ 655

►ಉತ್ತರಪ್ರದೇಶ ಮೊದಲ ಇನಿಂಗ್ಸ್: 84 ಓವರ್‌ಗಳಲ್ಲಿ 331/10

(ಉಮಂಗ್ ಶರ್ಮ 89, ಶಿವಂ ಚೌಧರಿ 57,ರಿಂಕು ಸಿಂಗ್ 73, ಉಪೇಂದ್ರ ಯಾದವ್ ಅಜೇಯ 49, ಎಸ್.ಗೋಪಾಲ್ 3-63, ಕೆ.ಗೌತಮ್ 2-114, ರೋನಿತ್ ಮೋರೆ 2-79)

►ಕರ್ನಾಟಕ ಎರಡನೇ ಇನಿಂಗ್ಸ್: 59 ಓವರ್‌ಗಳಲ್ಲಿ 262/0

(ಮಾಯಾಂಕ್ ಅಗರವಾಲ್ ಅಜೇಯ 133, ಆರ್.ಸಮರ್ಥ್ ಅಜೇಯ 126)

ರಣಜಿ ಟ್ರೋಫಿ ಫಲಿತಾಂಶ

►ಒಂಗೊಲೆ: ಮುಂಬೈ-ಆಂಧ್ರ ಪಂದ್ಯ ಡ್ರಾ

►ಗುವಾಹಟಿ: ಅಸ್ಸಾಂ ವಿರುದ್ಧ ಹೈದರಾಬಾದ್‌ಗೆ 4 ವಿಕೆಟ್‌ಗಳ ಜಯ

►ವಡೋದರ: ಬರೋಡಾ-ಒಡಿಶಾ ಪಂದ್ಯ ಡ್ರಾ

►ಪಣಜಿ: ಗೋವಾ ವಿರುದ್ಧ ವಿದರ್ಭಕ್ಕೆ ಇನಿಂಗ್ಸ್ ,37 ರನ್ ಜಯ

►ಸೂರತ್: ರಾಜಸ್ಥಾನ ವಿರುದ್ಧ ಗುಜರಾತ್‌ಗೆ ಇನಿಂಗ್ಸ್, 107 ರನ್ ಜಯ

►ರೋಹ್ಟಕ್: ಜಮ್ಮು-ಕಾಶ್ಮೀರದ ವಿರುದ್ಧ ಹರ್ಯಾಣಕ್ಕೆ 18 ರನ್ ಜಯ

►ತಿರುವನಂತಪುರ: ಸೌರಾಷ್ಟ್ರದ ವಿರುದ್ಧ ಕೇರಳಕ್ಕೆ 309 ರನ್ ಜಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News