ಮತಾಂತರದಿಂದ ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಮುಖ: ಟಿ.ವಿ.ಮೋಹನದಾಸ ಪೈ

Update: 2017-11-21 15:39 GMT

ಉಡುಪಿ, ನ. 21: ಸ್ವಾತಂತ್ರ್ಯ ದೊರೆತ ಸಂದರ್ಭ ದೇಶದಲ್ಲಿ ಶೇ.85ರಷ್ಟಿದ್ದ ಹಿಂದೂಗಳ ಸಂಖ್ಯೆ ಇದೀಗ ಶೇ.77ಕ್ಕೆ ಇಳಿಕೆಯಾಗಿದೆ. ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುವ ಮೂಲಕ ದೇಶದಲ್ಲಿ ಕ್ರೈಸ್ತರ ಸಂಖ್ಯೆ ಸುಮಾರು 7ರಿಂದ 8 ಕೋಟಿಗೆ ಏರಿಕೆಯಾಗಿದೆ. ಆದರೆ ಅಧೀಕೃತ ಅಂಕಿ ಅಂಶಗಳಲ್ಲಿ ಕ್ರೈಸ್ತರ ಜನಸಂಖ್ಯೆ ಕೇವಲ 3.50 ಕೋಟಿ ಎಂಬುದಾಗಿ ನಮೂದಿಸಲಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಗ್ಲೋಬಲ್ ಎಜುಕೇಶನ್ ನ ಮುಖ್ಯಸ್ಥ ಟಿ.ವಿ.ಮೋಹನದಾಸ ಪೈ ತಿಳಿಸಿದ್ದಾರೆ.

ಮಂಗಳವಾರ ಉಡುಪಿಯ ಕಲ್ಸಂಕ ರಾಯಲ್ ಗಾರ್ಡನ್‌ನಲ್ಲಿ ನಿರ್ಮಿಸಲಾದ ಧರ್ಮ ಸಂಸದ್ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಣದ ಆಮಿಷವೊಡ್ಡಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ಅಮೆರಿಕಾ ಮತ್ತು ಯುರೋಪ್ ದೇಶಗಳಿಂದ ಪ್ರತಿ ವರ್ಷ ಕೋಟ್ಯಂತರ ಹಣ ಭಾರತಕ್ಕೆ ಬರುತ್ತಿದೆ. ಬಡಜನರಿಗೆ ಮಂಕುಬೂದಿ ಎರಚುವ ಕಾರ್ಯವನ್ನು ಕೆಲ ಕ್ರೈಸ್ತ ಧರ್ಮ ಪ್ರಚಾರಕರು ಮಾಡುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವ ಹಿಂದೂಗಳಿಗೆ ಕೋಮುವಾದಿ ಎಂಬ ಪಟ್ಟವನ್ನು ಕಟ್ಟಲಾಗುತ್ತದೆ. ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲದ ಪರಿಣಾಮ ಇಂತಹ ಪರಿಸ್ಥಿತಿಯನ್ನು ನಾವು ಇಂದು ಎದುರಿಸುತ್ತಿದ್ದೇವೆ ಎಂದರು.

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಜಕೀಯ ಪಕ್ಷಗಳು ಹಿಂದುಗಳನ್ನು ವಿಭಜಿಸುತ್ತಿವೆ. ಹಿಂದೂಗಳ ಮುಗ್ದತೆಯನ್ನು ರಾಜಕೀಯ ಪಕ್ಷಗಳು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿವೆ. ಜಾತಿ, ಧರ್ಮದ ಹೆಸರಿನಲ್ಲಿ ಹಿಂದು ಧರ್ಮವನ್ನು ಒಡೆದು ಹಿಂದೂಗಳ ನಡುವೆ ಸಂಘರ್ಷವನ್ನು ಸೃಷ್ಟಿಸಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿ ಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಾಲಯವನ್ನು ಉದ್ಘಾಟಿಸಿದ ಪೇಜಾವರ ಕಿರಿಯ ಯತಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಸನಾತ ಸಂಸ್ಕೃತಿಯನ್ನು ಅರಿಯದೇ ಅನೇಕ ಮಂದಿ ಟೀಕೆ ಮಾಡುತ್ತಿದ್ದಾರೆ. ಆಧ್ಯಾತ್ಮಿಕ ತತ್ವದಲ್ಲಿಯೂ ಕೂಡ ಪರಮಾತ್ಮ ಒಬ್ಬನೇ. ನಮ್ಮ ತನವನ್ನು ಅರಿತುಕೊಳ್ಳದೇ ಇತರರು ಹೇಳಿದಾಗ ನಾವು ಕಸಿವಿಸಿಕೊಳ್ಳುತ್ತೇವೆ. ಇಂದು ನಾವು ನಮ್ಮ ಹಿಂದೂ ಧರ್ಮದ ಅಂತರ್ ಸತ್ವವನ್ನು ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭ ವಿಎಚ್‌ಪಿ ಅಖಿಲ ಭಾರತೀಯ ಕೇಂದ್ರೀಯ ಕಾರ್ಯದರ್ಶಿ ರಾಜೇಂದ್ರ ಪಂಕಜ್, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ., ಮುಖಂಡರಾದ ಎಂ.ಬಿ.ಪುರಾಣಿಕ್, ವಿಲಾಸ್ ನಾಯಕ್, ಟಿ.ಎಂ.ಪಿ.ಶೆಣೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News