×
Ad

ಗುರುಗ್ರಾಮ್‌ನ ಲಕ್ಸುರಿ ಹೌಸಿಂಗ್ ಪ್ರಾಜೆಕ್ಟ್ ವಂಚನೆ ಪ್ರಕರಣದಲ್ಲಿ ಶರಪೋವಾ

Update: 2017-11-21 19:55 IST

ಹೊಸದಿಲ್ಲಿ, ನ.21: ಗುರುಗ್ರಾಮ್‌ನಲ್ಲಿ ಲಕ್ಸುರಿ ಹೌಸಿಂಗ್ ಪ್ರಾಜೆಕ್ಟ್ ಹಗರಣದಲ್ಲಿ ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಗುರುಗ್ರಾಮದಲ್ಲಿ ‘ಬ್ಯಾಲೆಟ್ ಬೈ ಶರಪೋವಾ’ ಎಂಬ ಹೆಸರಿನ ವಸತಿ ಸಮುಚ್ಛಯ ಪ್ರಕರಣದಲ್ಲಿ ಮನೆ ಖರೀದಿದಾರರು ಸಲ್ಲಿಸಿದ ದೂರಿನಂತೆ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿ ನ್ಯಾಯಾಲಯವು ಪೊಲೀಸರಿಗೆ ಆದೇಶ ನೀಡಿತ್ತು. ಅದರಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಾಯುವ್ಯ ದಿಲ್ಲಿ ಮೆಟ್ರೋಪಾಲಿಟನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ರಾಜೇಶ್ ಮಲಿಕ್ ಅವರು ಮರಿಯಾ ಶರಪೋವಾ, ಹೋಮ್‌ಸ್ಟೆಡ್ ಇನ್‌ಫ್ರಾಸ್ಟ್ರೆಕ್ಚರ್ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್, ಹೋಮ್‌ಸ್ಟೆಡ್ ಇನ್‌ಫ್ರಾಸ್ಟ್ರೆಕ್ಚರ್ ಮೇಂಟೆನೆನ್ಸ್ ಪ್ರೈವೆಟ್ ಲಿಮಿಟೆಡ್‌ಮತ್ತು ಹೋಮ್‌ಸ್ಟೆಡ್ ಅರಾಬಿಕ್ ಹೋಮ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಇದರ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಇತ್ತೀಚೆಗೆ ಆದೇಶ ನೀಡಿದ್ದರು.

 ಮನೆ ಕಟ್ಟಿಸಿಕೊಡುವ ವಾಗ್ದಾನ ನೀಡಿ ಖರೀದಿದಾರರಿಂದ ಮಿಲಿಯಗಟ್ಟಲೆ ಡಾಲರ್ ಹಣವನ್ನು ವಸೂಲಿ ಮಾಡಿರುವ ಪ್ರಕರಣದಲ್ಲಿ ಮರಿಯಾ ಶರಪೋವಾ ವಿರುದ್ಧ ವಂಚನೆ, ಕ್ರಿಮಿನಲ್ ಒಳಸಂಚು ಆರೋಪ ದಾಖಲಿಸಲಾಗಿದೆ ಎಂದು ಮನೆ ಖರೀದಿದಾರರೊಬ್ಬರ ಪರ ವಕೀಲರಾದ ಪಿಯೂಷ್ ಸಿಂಗ್ ತಿಳಿಸಿದ್ದಾರೆ.

 30ರ ಹರೆಯದ ಶರಪೋವಾ ಅವರು 2012ರಲ್ಲಿ ‘ಬ್ಯಾಲೆಟ್ ಬೈ ಶರಪೋವಾ’ ವಸತಿ ಸಮುಚ್ಛಯ ನಿರ್ಮಣಕ್ಕೆ ಸಂಬಂಧಿಸಿ ಭಾರತಕ್ಕೆ ಭಾರತಕ್ಕೆ ಆಗಮಿಸಿದ್ದರು.

ಬಿಲ್ಡರ್ಸ್‌ಗಳು ಮನೆ ಖರೀದಿದಾರರನ್ನು ಆಕರ್ಷಿಸಲು ಮರಿಯಾ ಶರಪೋವಾ ಹೆಸರಲ್ಲಿ ಜಾಹೀರಾತು ನೀಡಿದ್ದರು. ವಸತಿ ಸಮುಚ್ಛಯದಲ್ಲಿ ಟೆನಿಸ್ ಅಕಾಡೆಮಿ, ಕ್ಲಬ್ ಹೌಸ್ ಮತ್ತು ಹೆಲಿಪ್ಯಾಡ್ ಇರುವುದಾಗಿ ಹೇಳಲಾಗಿತ್ತು. ಮರಿಯಾ ಶರಪೋವಾ ಅವರು ವೆಬ್‌ಸೈಟ್‌ನಲ್ಲಿ ಯೋಜನೆಯ ಉದ್ದೇಶವನ್ನು ವಿವರಿಸಿದ್ದರು ಎಂದು ಆರೋಪಿಸಲಾಗಿದೆ.

ಎ.14, 2013ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಮೂರು ವರ್ಷಗಳಲ್ಲಿ ಖರೀದಿದಾರರಿಗೆ ಮನೆಯನ್ನು ಹಸ್ತಾಂತರಿಸಬೇಕಿತ್ತು.

ಈ ಸಂಬಂಧ ಹೋಮ್‌ಸ್ಟೆಡ್ ಇನ್‌ಫ್ರಾಸ್ಟ್ರೆಕ್ಚರ್ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಇದೀಗ ವೌನಕ್ಕೆ ಶರಣಾಗಿದೆ. ಶರಪೋವಾ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.

 2015ರಲ್ಲಿ ಶರಪೋವಾ ಎಂಡೋರ್ಸ್‌ಮೆಂಟ್ ಮೂಲಕ 30 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದರು. ಈ ಪೈಕಿ 23ಮಿಲಿಯನ್ ಡಾಲರ್ ಇಂತಹ ಯೋಜನೆಗಳ ಬಂದಿತ್ತು.

ಡೋಪಿಂಗ್ ಹಗರಣದಲ್ಲಿ 15 ತಿಂಗಳ ನಿಷೇಧದ ಸಜೆ ಅನುಭವಿಸಿ ಶರಪೋವಾ ಕಳೆದ ಎಪ್ರಿಲ್‌ನಲ್ಲಿ ಟೆನಿಸ್ ಸ್ಪರ್ಧಾ ಕಣಕ್ಕೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News