‘ಎಸ್ ದುರ್ಗಾ’ ಸಿನೆಮಾ ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ಆದೇಶ

Update: 2017-11-21 14:53 GMT

ಕೊಚ್ಚಿ, ನ.21: ಗೋವಾದಲ್ಲಿ ನಡೆಯುತ್ತಿರುವ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಮಲಯಾಳಂ ಸಿನೆಮ ‘ಎಸ್ ದುರ್ಗಾ’ವನ್ನು ಪ್ರದರ್ಶಿಸಬೇಕೆಂದು ಕೇರಳ ಹೈಕೋರ್ಟ್ ಆದೇಶಿಸಿದ್ದು, ಸಿನೆಮಾ ಪ್ರದರ್ಶನವನ್ನು ಕೈಬಿಟ್ಟಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ರಮ ಸಮರ್ಥನೀಯವಲ್ಲ ಎಂದು ತಿಳಿಸಿದೆ.

 ಸನಾಲ್ ಕುಮಾರ್ ಶಶಿಧರನ್ ನಿರ್ದೇಶನದ ಈ ಸಿನೆಮಾಗೆ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣಪತ್ರ ನೀಡಿದೆ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುವ ಕಾರಣ ಇದಕ್ಕೆ ಎಲ್ಲರೂ ಬದ್ಧವಾಗಿರಬೇಕು ಹಾಗೂ ಈ ನಿರ್ಧಾರವನ್ನು ತಳ್ಳಿಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ.ವಿನೋದ್ ಹೇಳಿದರು.

   ಐಎಫ್‌ಎಫ್‌ಐನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಭಾರತೀಯ ಸಿನೆಮಾಗಳ ಪಟ್ಟಿಯಲ್ಲಿದ್ದ ಮರಾಠಿ ಸಿನೆಮ ‘ನ್ಯೂಡ್’ ಹಾಗೂ ‘ಎಸ್ ದುರ್ಗಾ’ವನ್ನು ಯಾವುದೇ ಕಾರಣ ನೀಡದೆ ಮಾಹಿತಿ ಮತ್ತು ಪ್ರಸಾರ ಇಲಾಖೆ ತೆಗೆದುಹಾಕಿತ್ತು. ಇದನ್ನು ಪ್ರತಿಭಟಿಸಿ ತೀರ್ಪುಗಾರರ ಸಮಿತಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದರು. ಅಲ್ಲದೆ ಈ ಕ್ರಮವನ್ನು ಪ್ರಶ್ನಿಸಿ ‘ದುರ್ಗಾ’ ಸಿನೆಮದ ನಿರ್ದೇಶಕ ಶಶಿಧರನ್ ಕೇರಳ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

 ಆದರೆ ಈ ಪ್ರಕರಣ ಕೇರಳ ಹೈಕೋರ್ಟ್‌ನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ವಾದ ಮಂಡಿಸಿತ್ತು. ಆದರೆ ಸಿನೆಮಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಕೇರಳದಲ್ಲಿ ನಡೆದಿರುವ ಕಾರಣ ಈ ಪ್ರಕರಣ ಕೇರಳ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಮೂರ್ತಿ ತಿಳಿಸಿದ್ದರು. ಈ ಸಿನೆಮಕ್ಕೆ ಮೊದಲು ‘ಸೆಕ್ಸಿ ದುರ್ಗಾ’ ಎಂದು ಹೆಸರಿಡಲಾಗಿತ್ತು. ಆದರೆ ಸಿನೆಮದ ಹೆಸರು ಹಾಗೂ ಕೆಲವು ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ಸೂಚಿಸಿದ ಬಳಿಕ ದೃಶ್ಯಗಳಿಗೆ ಕತ್ತರಿಪ್ರಯೋಗ ನಡೆಸಿ ಹೆಸರನ್ನು ‘ಎಸ್ ದುರ್ಗಾ’ ಎಂದು ಮಾರ್ಪಾಟು ಮಾಡಲಾಗಿದೆ.

 ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಶಿಧರನ್, ಇದು ಸಿನೆಮಕ್ಕೆ ದೊರೆತ ಗೆಲುವಾಗಿದೆ ಎಂದಿದ್ದಾರೆ. ರಾಟರ್‌ಡಾಂನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಎಸ್ ದುರ್ಗ’ ಸಿನೆಮ ಟೈಗರ್ ಪುರಸ್ಕಾರ ಪಡೆಯುವ ಮೂಲಕ, ಈ ಪ್ರತಿಷ್ಠಿತ ಪದಕ ಪಡೆದಿರುವ ಪ್ರಪ್ರಥಮ ಭಾರತೀಯ ಸಿನೆಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಮುಖಂಡನಾಗಿದ್ದ ಶಶಿಧರನ್, ಐಎಫ್‌ಎಫ್‌ಐ ಬಿಜೆಪಿ ಅಥವಾ ಆಡಳಿತಾರೂಢ ಸರಕಾರದ ಚಿತ್ರೋತ್ಸವ ಆಗಬಾರದು. ಭಾರತೀಯ ಚಿತ್ರೋತ್ಸವ ಆಗಬೇಕು ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News