ಬನ್ಸಾಲಿ, ದೀಪಿಕಾ ಸಮಾನ ಜವಾಬ್ದಾರರು; ಶಿಕ್ಷೆಗೆ ಅರ್ಹರು: ಆದಿತ್ಯನಾಥ್

Update: 2017-11-21 15:30 GMT

ಹೊಸದಿಲ್ಲಿ, ನ.21 : ಪದ್ಮಾವತಿ ಚಲನಚಿತ್ರದ ವಿರುದ್ಧದ ಪ್ರತಿಭಟನೆಗೆ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡು ಕೋಣೆ ಕೂಡ ಜವಾಬ್ದಾರರು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.

 ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರೊಬ್ಬರಿಗೂ ಇಲ್ಲ. ಅದು ಸಂಜಯ್ ಬನ್ಸಾಲಿ ಆಗಿರಲಿ, ಇತರ ಯಾರೇ ಆಗಿರಲಿ. ಬನ್ಸಾಲಿ ಹಾಗೂ ದೀಪಿಕಾಗೆ ಕೊಲೆ ಬೆದರಿಕೆ ಹಾಕಿರುವುದು ತಪ್ಪು ಎಂಬುದು ನನ್ನ ಭಾವನೆ. ಜನರ ಭಾವನೆಗಳೆಗ ಧಕ್ಕೆ ಉಂಟು ಮಾಡಿ ಬನ್ಸಾಲಿ ಕೂಡ ತಪ್ಪು ಮಾಡಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಕೊಲೆ ಬೆದರಿಕೆ ಹಾಕಿದ ಬಿಜೆಪಿ ನಾಯಕ ಹಾಗೂ ಚಿತ್ರ ನಿರ್ದೇಶಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪದ್ಮಾವತಿ ವಿರುದ್ಧದ ಪ್ರತಿಭಟನೆ ನ್ಯಾಯಬದ್ದವೆಂದು ಪ್ರತಿಪಾದಿಸಿರುವ ಪಂಜಾಬ್ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳು, ಇತಿಹಾಸವನ್ನು ತಿರುಚಿದ ಈ ಚಲನಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಪದ್ಮಾವತಿ ಚಲನಚಿತ್ರದ ಕುರಿತಂತೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡುಕೋಣೆ ತಲೆಗೆ 10 ಕೋ. ರೂ. ಬಹುಮಾನ ಘೋಷಿಸಿದ್ದ ಬಿಜೆಪಿಯ ನಾಯಕ ಸೂರಜ್ ಪಾಲ್ ಅಮು ವಿರುದ್ಧ ಗುರ್ಗಾಂವ್‌ನ ವ್ಯಕ್ತಿಯೊಬ್ಬರು ಎಫ್‌ಐಆರ್ ದಾಖಲಿಸಿದ್ದಾರೆ.

ಬಿಜೆಪಿಯ ಮುಖ್ಯ ಮಾಧ್ಯಮ ಸಂಯೋಜಕ ಅಮು ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗ ಹರ್ಯಾಣ ಡಿಜಿಪಿಗೆ ಪತ್ರ ಬರೆದಿದೆ.

 2018ರಲ್ಲಿ ಪದ್ಮಾವತಿ ಬಿಡುಗಡೆ

 ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಲನಚಿತ್ರ ಪದ್ಮಾವತಿ ಬಿಡುಗಡೆ ಮಾಡದಿರುವ ಸೂಚನೆಯನ್ನು ನಿರ್ಮಾಪಕರು ನೀಡಿದ್ದರು. ಇದರಿಂದ ಪದ್ಮಾವತಿ ಮುಂದಿನ ವರ್ಷದ ವರೆಗೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲ.

ಚಲನಚಿತ್ರವನ್ನು ಡಿಸೆಂಬರ್ 1ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಿರ್ಮಾಪಕರು ಈ ದಿನಾಂಕವನ್ನು ಮುಂದೂಡಿದರು. ಕಾಗದ ಪತ್ರಗಳು ಅಪೂರ್ಣ ಎನ್ನುವ ಕಾರಣಕ್ಕೆ ಚಲನಚಿತ್ರಕ್ಕೆ ಅನುಮತಿ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದ ಹಿನ್ನೆಲೆಯಲ್ಲಿ ದಿನಾಂಕ ಮುಂದೂಡುವುದು ನಿರ್ಮಾಪಕರಿಗೆ ಅನಿವಾರ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News