ಕೊಹ್ಲಿ 5ನೇ ಸ್ಥಾನಕ್ಕೆ ಭಡ್ತಿ; 3ನೆ ಸ್ಥಾನಕ್ಕೆ ಕುಸಿದ ಜಡೇಜ

Update: 2017-11-21 18:09 GMT

ಹೊಸದಿಲ್ಲಿ, ನ.21: ಶ್ರೀಲಂಕಾ ವಿರುದ್ಧ ಸೋಮವಾರ ಕೋಲ್ಕತಾದಲ್ಲಿ ಕೊನೆಗೊಂಡಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಐದನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

 ಶ್ರೀಲಂಕಾ ವಿರುದ್ಧ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ 5ನೇ ಹಾಗೂ ಕೊನೆಯ ದಿನವಾದ ರವಿವಾರ ಕೊಹ್ಲಿ 119 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿದ್ದರು. ಇದು ಕೊಹ್ಲಿಯ 50ನೇ ಅಂತಾರಾಷ್ಟ್ರೀಯ ಶತಕವಾಗಿತ್ತು.

ಆಸ್ಟ್ರೇಲಿಯದ ಡೇವಿಡ್ ವಾರ್ನರ್‌ರನ್ನು ಹಿಂದಿಕ್ಕಿದ ಕೊಹ್ಲಿ ಟೆಸ್ಟ್ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. ಕೊಹ್ಲಿ ಏಕದಿನ ಹಾಗೂ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಡಿ.23 ರಿಂದ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ತಂಡ 5 ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿಯನ್ನು ಆಡಲಿದ್ದು ವಾರ್ನರ್‌ಗೆ ಕೊಹ್ಲಿಯನ್ನು ಐಸಿಸಿ ರ್ಯಾಂಕಿಂಗ್‌ನಲ್ಲಿ ಹಿಂದಿಕ್ಕುವ ಅವಕಾಶವಿದೆ.

 ಈಡನ್‌ಗಾರ್ಡನ್ಸ್‌ನಲ್ಲಿ 2 ಇನಿಂಗ್ಸ್‌ಗಳಲ್ಲಿ ಕೇವಲ 2 ಓವರ್‌ಗಳ ಬೌಲಿಂಗ್ ಮಾಡಿದ್ದ ರವೀಂದ್ರ ಜಡೇಜ 20 ರೇಟಿಂಗ್ ಪಾಯಿಂಟ್‌ನ್ನು ಕಳೆದುಕೊಂಡು ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಲಂಕಾ ವಿರುದ್ಧ ಇನ್ನು ಎರಡು ಪಂದ್ಯಗಳನ್ನಾಡಲಿರುವ ಜಡೇಜಗೆ ರ್ಯಾಂಕಿಂಗ್‌ನಲ್ಲಿ ಪ್ರಗತಿಯಾಗುವ ಅವಕಾಶವಿದೆ.

ಕೋಲ್ಕತಾ ಟೆಸ್ಟ್‌ನಲ್ಲಿ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ವೇಗದ ಬೌಲರ್ ಭುವನೇಶ್ವರ ಕುಮಾರ್ 8 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 29ನೆ ಸ್ಥಾನಕ್ಕೇರಿದ್ದಾರೆ. ಮೊದಲ ಟೆಸ್ಟ್ ನಲ್ಲಿ 6 ವಿಕೆಟ್ ಗೊಂಚಲು ಪಡೆದಿದ್ದ ಮುಹಮ್ಮದ್ ಶಮಿ ಒಂದು ಸ್ಥಾನ ಭಡ್ತಿ ಪಡೆದು 18ನೆ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News