ಒಂದೇ ದಿನ 4 ಚಿನ್ನ ಜಯಿಸಿದ ಶಾರ್ದೂಲ್ ವಿಹಾನ್
ಹೊಸದಿಲ್ಲಿ, ನ.21: ಉತ್ತರ ಪ್ರದೇಶದ 14ರ ಬಾಲಕ ಶಾರ್ದೂಲ್ ವಿಹಾನ್ 61ನೇ ಆವೃತ್ತಿಯ ರಾಷ್ಟ್ರೀಯ ಶಾಟ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಒಂದೇ ದಿನ ನಾಲ್ಕು ಚಿನ್ನದ ಪದಕಗಳನ್ನು ಜಯಿಸಿ ಗಮನ ಸೆಳೆದಿದ್ದಾರೆ. ಮಂಗಳವಾರ ಇಲ್ಲಿನ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಶಾರ್ದೂಲ್ ಹಿರಿಯರ ಹಾಗೂ ಕಿರಿಯರ ಡಬಲ್ ಟ್ರಾಪ್ ವೈಯಕ್ತಿಕ ಹಾಗೂ ಟೀಮ್ ಇವೆಂಟ್‌ನಲ್ಲಿ ಚಿನ್ನ ಜಯಿಸಿ ಪ್ರಾಬಲ್ಯ ಮೆರೆದಿದ್ದಾರೆ.
ಏಷ್ಯನ್ ಚಾಂಪಿಯನ್‌ಶಿಪ್‌ನ ಮಾಜಿ ಚಾಂಪಿಯನ್ ಅನ್ವರ್ ಸುಲ್ತಾನ್‌ರಿಂದ ತರಬೇತಿ ಪಡೆಯುತ್ತಿರುವ ಶಾರ್ದೂಲ್ ಹಿರಿಯರ ವಿಭಾಗದ ವೈಯಕ್ತಿಕ ಇವೆಂಟ್ ಫೈನಲ್‌ನಲ್ಲಿ ಹಾಲಿ ವಿಶ್ವ ನಂ.1 ಡಬಲ್ ಟ್ರಾಪ್ ಶೂಟರ್ ಅಂಕುರ್ ಮಿತ್ತಲ್‌ರನ್ನು 78-76 ಅಂತರದಿಂದ ಮಣಿಸಿದ್ದಾರೆ. ಜೂನಿಯರ್ ವಿಭಾಗದ ವೈಯಕ್ತಿಕ ಇವೆಂಟ್‌ನಲ್ಲಿ ಉತ್ತರಖಂಡದ ಶಪಥ್ ಭಾರದ್ವಾಜ್‌ರನ್ನು 77-74 ಅಂತರದಿಂದ ಸೋಲಿಸಿ ಚಿನ್ನ ಜಯಿಸಿದರು. ಪಂಜಾಬ್‌ನ ಸೆಹಾಜ್‌ಪ್ರೀತ್ ಸಿಂಗ್(55 ಅಂಕ)ಮೂರನೆ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟರು. ಡಬಲ್ ಟ್ರಾಪ್‌ನ ಟೀಮ್ ಇವೆಂಟ್‌ನಲ್ಲಿ ಶಾರ್ದೂಲ್ ಹಾಗೂ ಮುಹಮ್ಮದ್ ಅಸಾಬ್ ಒಟ್ಟು 411 ಅಂಕ ಗಳಿಸುವ ಮೂಲಕ ಚಿನ್ನ ಜಯಿಸಿದರು.ಅಂಕುರ್ ಮಿತ್ತಲ್, ಸಂಗ್ರಾಮ್ ದಾಹಿಯಾ ಹಾಗೂ ಅಜಯ್‌ಮಿತ್ತಲ್ ಅವರಿದ್ದ ಹರ್ಯಾಣ ತಂಡ 394 ಅಂಕ ಗಳಿಸಿ ಬೆಳ್ಳಿ ಜಯಿಸಿತು. ಮಧ್ಯಪ್ರದೇಶ ತಂಡ ಕಂಚಿಗೆ ತೃಪ್ತಿಪಟ್ಟಿತು. ಜೂನಿಯರ್ ಟೀಮ್ ಇವೆಂಟ್‌ನಲ್ಲಿ ಅಝ್ಗರ್ ಹುಸೈನ್ ಖಾನ್ ಅವರೊಂದಿಗೆ ಆಡಿದ ಶಾರ್ದೂಲ್ ಒಟ್ಟು 392 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಪಂಜಾಬ್(352) ಹಾಗೂ ಮಧ್ಯಪ್ರದೇಶ(348) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದವು.