ಹವ್ಯಾಸಿಗಳಿಗೆ ಆದರ್ಶ ಕಿಟ್ಟಣ್ಣ ಶೆಟ್ಟಿ: ಕುಕ್ಕುವಳ್ಳಿ

Update: 2017-11-21 18:37 GMT

ಮಂಗಳೂರು, ನ. 21: 'ಯಕ್ಷಗಾನ ರಂಗದಲ್ಲಿ ವೃತ್ತಿಕಲಾವಿದರಷ್ಟೇ ಸಮರ್ಥವಾಗಿ ಪಾತ್ರಪೋಷಣೆ ಮಾಡುವ ಹವ್ಯಾಸಿಗಳಿದ್ದಾರೆ.ಅಂಥವರಿಗೆ ನುಳಿಯಾಲು ಕಿಟ್ಟಣ್ಣ ಶೆಟ್ಟಿ ಆದರ್ಶಪ್ರಾಯರಾದವರು.ಪುತ್ತೂರು ತಾಲೂಕು ನಿಡ್ಪಳ್ಳಿಯ ಶ್ರೀಸತ್ಯನಾರಾಯಣ ಯಕ್ಷಗಾನ ಕಲಾಕೂಟದ ಸಕ್ರಿಯ ಸದಸ್ಯರಾಗಿದ್ದ ಅವರು ಪುಂಡುವೇಷ , ರಾಜವೇಷ ಹಾಗೂ ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಪರಿಣತರಾಗಿದ್ದರು.ದೈವಾರಾಧನೆಯ ಗುರಿಕಾರರಾಗಿ, ಪ್ರಗತಿಪರ ಕೃಷಿಕರಾಗಿ ಮಾಣಿ ಪರಿಸರದಲ್ಲಿ ಅವರು ಪ್ರಸಿದ್ಧರು' ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

 'ಯಕ್ಷಾಂಗಣ ಮಂಗಳೂರು ' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರು ಮಂಗಳೂರು  ಪುರಭವನದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ - 2017' ಪಂಚಮ ವರ್ಷದ ನುಡಿಹಬ್ಬದ ಎರಡನೇ ದಿನ ಹವ್ಯಾಸಿ ಕಲಾವಿದ ದಿ.ನುಳಿಯಾಲು ಕಿಟ್ಟಣ್ಣ ಶೆಟ್ಟಿ ಅವರ ಸಂಸ್ಕರಣಾ ಸಮಾರಂಭದಲ್ಲಿ ಅವರು ನುಡಿನಮನ ಸಲ್ಲಿಸಿದರು. ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಾಮ ನಾಯಕ್ ಕೋಟೆಕಾರು ದೀಪ ಪ್ರಜ್ವಲನೆ ಮಾಡಿದರು. ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸಂಸ್ಮರಣೆಗೈದರು.

 ಕೃತಿ ಬಿಡುಗಡೆ

ಇದೇ ಸಂದರ್ಭದಲ್ಲಿ ಮೈಸೂರಿನ ಗ.ನಾ.ಭಟ್ ಅವರು ಸಂಪಾದಿಸಿದ 'ಜೋಶಿ ವಾಗರ್ಥ ಗೌರವ' ಕೃತಿಯನ್ನು ಮಾತಾ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಎನ್.ಸಂತೋಷ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು. 'ಯಕ್ಷ ಸಂಪನ್ನರು'ಕೃತಿಯನ್ನು ಆ್ಯಪಲ್ ಕಂಪ್ಯೂಟರ್ಸ್ ನ ರೊ.ನವೀನ್ ಕಿಲ್ಲೆ ಅನಾವರಣ ಮಾಡಿದರು. 'ಅಮ್ಮನೆಡೆಗೆ ನಮ್ಮ ನಡೆ' ಪಾದಯಾತ್ರೆ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಮತ್ತು ಉದ್ಯಮಿ ದಿವಿನ್ ಮೇಂಡ ಅತಿಥಿಗಳಾಗಿದ್ದರು. ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಾಂಗಣದ ಉಪಾಧ್ಯಕ್ಷ ಅತ್ತಾವರ ಶಿವಾನಂದ ಕರ್ಕೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ದಿನಕರ ಎಸ್.ಪಚ್ಚನಾಡಿ ವಂದಿಸಿದರು. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ನಿರೂಪಿಸಿದರು. ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ತೋನ್ಸೆ ಪುಷ್ಕಳಕುಮಾರ್,ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸುಧಾಕರ ರಾವ್ ಪೇಜಾವರ, ವಾಸುದೇವ ಆರ್.ಕೊಟ್ಟಾರಿ,ವಕ್ವಾಡಿ ಶೇಖರ ಶೆಟ್ಟಿ,ಸಿದ್ಧಾರ್ಥ ಅಜ್ರಿ, ಕೃಷ್ಣಪ್ಪ ಗೌಡ ಪಡ್ಡಂಬೈಲ್ ಮತ್ತು ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು. ಬಳಿಕ ಪದ್ಯಾಣ ಗಣಪತಿ ಭಟ್ ಮತ್ತು ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆಯಲ್ಲಿ 'ಮಾರ್ಕಾಂಡೇಯ' ತಾಳಮದ್ದಳೆ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News