ಮಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ಪರ್ಧೆ: ಗುರುಪುರ ನದಿ ಬಳಿ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಕೇಟಿಂಗ್ ಟ್ರಾಕ್

Update: 2017-11-22 08:11 GMT

ಮಂಗಳೂರು, ನ. 22: ರಾಜ್ಯ ಮಟ್ಟದ ವೇಗದ ರೋಲರ್ ಸ್ಕೇಟಿಂಗ್ ಸ್ಪರ್ಧೆ ಹಾಗೂ ಚಾಂಪಿಯನ್‌ಶಿಪ್ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ನ. 23 ರಿಂದ 27ರವರೆಗೆ ನಡೆಯಲಿದೆ.

ಮಂಗಳೂರಿನಲ್ಲಿ 26 ವರ್ಷಗಳ ಬಳಿಕ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆ ನಡೆಯುತ್ತಿದೆ. ಮಂಗಳೂರಿನ ಹೈ ಪ್ಲೈಯರ್ಸ್‌ ಸ್ಕೇಟಿಂಗ್ ಕ್ಲಬ್ ಹಾಗೂ ಫ್ರಾನ್ಸಿ ಡೋರಿಸ್ ಸ್ಕೇಟ್ ಸಿಟಿ ಸ್ಪರ್ಧೆಯನ್ನು ಪ್ರಾಯೋಜಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ವೇಗದ ತಾಂತ್ರಿಕ ಸಮಿತಿಯ ಶ್ರೀಕಾಂತ್ ರಾವ್ ಮಾಹಿತಿ ನೀಡಿದರು.

ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಸ್ಕೇಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುವ ಹಲವು ಪ್ರತಿಭೆಗಳಿದ್ದರೂ ಸೂಕ್ತವಾದ ಸ್ಕೇಟಿಂಗ್ ಅಂಕಣವಿಲ್ಲದ ಕಾರಣ ಇಲ್ಲಿ ಸ್ಪರ್ಧೆಗೆ ಅವಕಾಶ ದೊರಕಿರಲಿಲ್ಲ. ಇದೀಗ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಗೌರವಾಧ್ಯಕ್ಷ ಫ್ರಾನ್ಸಿಸ್ ಕೊನ್ಸೆಸೊ ಹಾಗೂ ಡೋರಿಸ್ ಕೊನ್ಸೆಸೋ ದಂಪತಿಯವರು ಗುರುಪುರ ನದಿ ತೀರದ ಹೊಯಿಗೆ ಬೈಲ್‌ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಕೇಟಿಂಗ್ ಅಂಕಣವನ್ನು ನಿರ್ಮಿಸಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದಾರೆ. ಇದು 200 ಮೀಟರ್‌ನ ಸಿಂಥೆಟಿಕ್ ಟ್ರಾಕ್ ಆಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

800 ಮಂದಿ ಸ್ಕೇಟರ್‌ಗಳು ಭಾಗವಹಿಸುವ ನಿರೀಕ್ಷೆ !

ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ಕೆಯಾದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಶೇಷವಾಗಿ ಏಷ್ಯನ್ ರಿಲೇ ಪದಕ ವಿಜೇತ ಧನುಷ್ ಬಾಬು, 2001ರಲ್ಲಿ ಏಷ್ಯನ್‌ನಲ್ಲಿ ಪದಕ ವಿಜೇತ ಹಾಗೂ ರಾಷ್ಟ್ರ ಮಟ್ಟದಲ್ಲಿ 48 ಚಿನ್ನದ ಪದಕ ಪಡೆದಿರುವ ವರ್ಷ ಪುರಾಣಿಕ್ ಮೈಸೂರು, ರಾಷ್ಟ್ರ ಮಟ್ಟದಲ್ಲಿ ಐದು ಬಾರಿ ಚಾಂಪಿಯನ್ ಆದ ರಾಘವೇಂದ್ರ, ಕಳೆದ ವರ್ಷ ರಾಷ್ಟ್ರ ಮಟ್ಟದ ಚಾಂಪಿಯನ್ ಆಗಿರುವ ಶಾಮೀಲ್ ಹರ್ಷದ್ ಅಲ್ಲದೆ ರಾಷ್ಟ್ರ ಮಟ್ಟಗ ಹಲವಾರು ಚಿನ್ನದ ಪದಕ ಪಡೆದಿರುವ ರಿಯಾ ಎಲಿಜಬೆತ್, ಅಚ್ಚಯ್ಯ ಆದಿತ್ಯ ರಾವ್, ರಿತಿಕ್ ಕರಡಿ, ಮೌನ ಬಾಬು, ಓಂಕಾರ್ ಯೋಗರಾಜ್, ಖುಷಿ ರಾಣಿ, ಡ್ಯಾಷಲ್ ಅಮಂಡ ಕೊನ್ಸೆಸೋ, ಮೋಕ್ಷ ಸುವರ್ಣ ಸೇರಿದಂತೆ 800 ಮಂದಿ ಸ್ಕೇಟರ್‌ಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ನ. 23ರಂದು ಅಂಕಣ, ಸ್ಪರ್ಧೆ ಉದ್ಘಾಟನೆ

ನ. 23ರಂದು ಬೆಳಗ್ಗೆ 7.30ಕ್ಕೆ ರಾಜ್ಯದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೊಸ ಅಂಕಣವನ್ನು ಉದ್ಘಾಟಿಸುವರು. ಮಂಗಳೂರು ದೇರೆಬೈಲ್ ಚರ್ಚ್‌ನ ಧರ್ಮಗುರು ವಂ. ಆಸ್ಟಿನ್ ಪಾಯಸ್ ಆಶೀರ್ವಚನ ನೀಡಲಿದ್ದಾರೆ.

ಅಂದು ಸಂಜೆ 5 ಗಂಟೆಗೆ ಸರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಸ್ಪರ್ಧೆಯ ಅಂಗವಾಗಿ ರೋಡ್ ರೇಸನ್ನು ನ. 25ರಂದು ಬೆಳಗ್ಗೆ 7 ಗಂಟೆಗೆ ಇರಾ, ಮುಡಿಪುವಿನಲ್ಲಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಹೈ ಪ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷ ಫ್ರಾನ್ಸಿಸ್ ಕೊನ್ಸೆಸೊ, ಕಾರ್ಯದರ್ಶಿ ಜಯರಾಜ್ ಹಾಗೂ ಹರ್ಷದ್ ಹುಸೇನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News