ಡಿ.4: ಗುರುಪುರ- ಕೈಕಂಬದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆ

Update: 2017-11-22 08:34 GMT

ಮಂಗಳೂರು, ನ. 22: ರಾಷ್ಟ್ರೀಯ ಹೆದ್ದಾರಿಯ 169ರ ಮಂಗಳೂರಿನಿಂದ ಕಾರ್ಕಳವರೆಗಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಚತುಷ್ಪಥಗೊಳಿಸಬೇಕೆಂದು ಒತ್ತಾಯಿಸಿ ಡಿ. 4ರಂದು ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 169 ಹೋರಾಟ ಸಮಿತಿ ವತಿಯಿಂದ ಈ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಸಮಿತಿಯ ಅಧ್ಯಕ್ಷ ಸುಧಾಕರ ಪೂಂಜಾ ಮಿಜಾರು ತಿಳಿಸಿದರು.

ಮಂಗಳೂರಿನಿ ಬಿಕರ್ನಕಟ್ಟೆ- ಕುಲಶೇಖರದಿಂದ ಮೂಡುಬಿದಿರೆಯಾಗಿ ಕಾರ್ಕಳದಿಂದ ಹಾದು ಹೋಗುವ ರಸ್ತೆಯನ್ನು 2000ದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಲಾಗಿದೆ. ಆದರೆ ಇದುವರೆಗೂ ರಸ್ತೆ ಅಗಲೀಕರಣಗೊಳಿಸುವ ಕಾರ್ಯ ನಡೆದಿಲ್ಲ. ರಸ್ತೆಗಳು ಹದಗೆಟ್ಟಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ರಸ್ತೆಯಲ್ಲಿ ಹಲವು ಅಪಘಾತಗಳು ನಡೆದಿವೆ. 50ಕ್ಕೂ ಅಧಿಕ ದ್ವಿಚಕ್ರ ವಾಹನ ಚಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಸಮಿತಿ ವತಿಯಿಂದ ಕಳೆದ ಒಂದು ವರ್ಷದಿಂದ ಈ ರಸ್ತೆ ಚತುಷ್ಪಥಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅವರು ಹೇಳಿದರು.

ಚತುಷ್ಪಥ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಯಾವುದೇ ಒತ್ತಡ ಅಥವಾ ಲಾಬಿಗೆ ಮಣಿಯದೆ ಭೂಸ್ವಾಧೀನಪಡಿಸಬೇಕು. ಭೂಮಿ ಕಳೆದುಕೊಂಡವರಿಗೆ ಯೋಗ್ಯ ಪರಿಹಾರ ಒದಗಿಸಬೇಕು. ಅಪಾಯದ ಅಂಚಿನಲ್ಲಿರುವ ಗುರುಪುರ ನದಿಗೆ ನೂತನ ಸೇತುವೆ ನಿರ್ಮಿಸಬೇಕು. ಈ ಬೇಡಿಕೆಗಳನ್ನು ಮುಂದಿಟ್ಟು ಅಂದು ಬೆಳಗ್ಗೆ 10 ಗಂಟೆಗೆ ಗುರುಪುರ- ಕೈಕಂಬದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

ಸುಮಾರು 45 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸುಮಾರು 20 ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕಾಮಗಾರಿ ಮಾತ್ರ ಆರಂಭ ಗೊಂಡಿಲ್ಲ ಎಂದು ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಪಕ್ಕಲಡ್ಕ ಬೇಸರಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು, ಸಂಘಟನಾ ಕಾರ್ಯದರ್ಶಿಗಳಾದ ಕಿಟ್ಟಣ್ಣ ರೈ ಕಾರಮೊಗರು, ಸುದರ್ಶ್ ಶೆಟ್ಟಿ ಪೆರ್ಮಂಕಿ ಉಪಸ್ಥಿತರಿದ್ದರು.

ಅಪಾಯಕಾರಿ ಸ್ಥಿತಿಯಲ್ಲಿದೆ ಗುರುಪುರ ಸೇತುವೆ !

1923ರಲ್ಲಿ ಗುರುಪುರ ನದಿಗೆ ಸೇತುವೆ ನಿರ್ಮಾಣವಾಗಿತ್ತು. ಇದೀಗ ಆ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಅದರಲ್ಲಿ ಪ್ರಸ್ತುತ 30ರಿಂದ 40 ಟನ್ ಭಾರದ ಘನ ವಾಹನಗಳು ಕೂಡಾ ಸಂಚರಿಸುತ್ತಿವೆ. ಆದ್ದರಿಂದ ನೂತನ ಸೇತುವೆ ಶೀಘ್ರವಾಗಿ ನಿರ್ಮಾಣವಾಗಬೇಕಿದೆ ಎಂದು ಸುಧಾಕರ ಪೂಂಜಾ ಮಿಜಾರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News