ಮುಘಲ್-ಎ-ಆಝಂ ಈಗ ಬಿಡುಗಡೆಗೊಂಡರೆ ನಿಷೇಧಿಸುವರೇ.....?
ಪಣಜಿ,ನ.22: ಚಿತ್ರ ನಿರ್ದೇಶಕ ಹಾಗು ಇಲ್ಲಿ ನಡೆಯುತ್ತಿರುವ 48ನೇ ಐಎಫ್‌ಎಫ್‌ಐ ಪನೋರಮಾ ವಿಭಾಗದ ಜ್ಯೂರಿ ಮುಖ್ಯಸ್ಥ ರಾಹುಲ್ ರವೈಲ್ ಅವರು ಭಾರೀ ವಿವಾದವನ್ನು ಸೃಷ್ಟಿಸಿರುವ ‘ಪದ್ಮಾವತಿ’ ಚಿತ್ರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ದಶಕಗಳ ಹಿಂದೆ ತೆರೆ ಕಂಡಿದ್ದ, ಇತಿಹಾಸದಲ್ಲಿ ಬದಲಾವಣೆ ಮಾಡಿಕೊಂಡಿದ್ದ ಪ್ರಸಿದ್ಧ ಹಿಂದಿ ಚಿತ್ರ ‘ಮುಘಲ್-ಎ-ಆಝಂ’ ಜೊತೆಗೆ ‘ಪದ್ಮಾವತಿ’ಯನ್ನು ಹೋಲಿಸಿದ ಅವರು, ಚಿತ್ರಕ್ಕೆ ಪ್ರತಿಭಟನೆ ಅನಗತ್ಯವಾಗಿದೆ. ಅನಾರ್ಕಲಿ ಸಂಪೂರ್ಣವಾಗಿ ಕಪೋಲಕಲ್ಪಿತ ಪಾತ್ರವಾಗಿತ್ತು. ಇತಿಹಾಸದಲ್ಲಿ ಅನಾರ್ಕಲಿ ಇರಲೇ ಇಲ್ಲ. ‘ಮುಘಲ್-ಎ-ಆಝಂ’ ಇಂದು ಬಿಡುಗಡೆಗೊಂಡರೆ ಅವರದನ್ನು ನಿಷೇಧಿಸುತ್ತಾರಾ? ಇಲ್ಲ ಎಂದು ಹೇಳಿದರು.
ಸಂಜಯ ಲೀಲಾ ಬನ್ಸಾಲಿ ಅವರು ‘ಪದ್ಮಾವತಿ’ ಚಿತ್ರವನ್ನು ತುಂಬ ಶ್ರದ್ಧೆ ಮತ್ತು ಕಠಿಣ ಪರಿಶ್ರಮದೊಂದಿಗೆ ನಿರ್ಮಿಸಿದ್ದಾರೆ. ಅವರು ಇತಿಹಾಸದೊಂದಿಗೆ ಆಟವಾಡುವ ವ್ಯಕ್ತಿಯಲ್ಲ, ಅವರು ಇತಿಹಾಸವನ್ನು ತಿರುಚದೆ ತನ್ನದೇ ಕಲ್ಪನೆಯೊಂದಿಗೆ ಚಿತ್ರವನ್ನು ಚಿತ್ರೀಕರಿಸಿರುತ್ತಾರೆ ಎಂದರು.
ಈ ವಿವಾದವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂದ ರವೈಲ್, ಈಗಿನ ಪರಿಸ್ಥಿತಿಯಲ್ಲಿ ಚಿತ್ರದ ಬಿಡುಗಡೆ ಬಹಳಷ್ಟು ಹಿಂಸಾಚಾರಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಹೀಗಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲು ಬನ್ಸಾಲಿ ಮತ್ತು ವಿಯಾಕಾಮ್ ಒಪ್ಪಿಕೊಂಡಿರುವುದನ್ನು ನಾನು ಮೆಚ್ಚುತ್ತೇನೆ ಎಂದರು.