ಈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳಲಿದೆ ಗುಂಡು ನಿರೋಧಕ ವಾಹನಗಳು
ಹೊಸದಿಲ್ಲಿ, ನ.22: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯು ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತರೆ ದಾಳಿಯ ಸಂದರ್ಭದಲ್ಲಿ ಹಾನಿಯನ್ನು ಕನಿಷ್ಠಗೊಳಿಸಲು ಕ್ಷಿಪ್ರ ಪ್ರತಿಕ್ರಿಯಾ ತಂಡ(ಕ್ಯೂಆರ್‌ಟಿ)ದ ಭಾಗವಾಗಿ ಗುಂಡು ನಿರೋಧಕ ವಾಹನಗಳು ಶೀಘ್ರವೇ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳಬಹುದು.
ದೇಶದಲ್ಲಿಯ ಕಾರ್ಯನಿರತ 98 ವಿಮಾನ ನಿಲ್ದಾಣಗಳ ಪೈಕಿ 59 ನಿಲ್ದಾಣಗಳಿಗೆ ಭದ್ರತೆಯನ್ನೊದಗಿಸುತ್ತಿರುವ ಸಿಐಎಸ್‌ಎಫ್ ದಿಲ್ಲಿ ಮತ್ತು ಮತ್ತು ಇತರ ಸೂಕ್ಷ್ಮ ವಿಮಾನ ನಿಲ್ದಾಣಗಳಿಗೆ ಗುಂಡು ನಿರೋಧಕ ವಾಹನಗಳಿಗಾಗಿ ಕೋರಿಕೆಯನ್ನು ಸಲ್ಲಿಸಿತ್ತು.
ಸಿಐಎಸ್‌ಎಫ್ ಇತ್ತೀಚಿಗೆ ಪ್ರಾಯೋಗಿಕ ನೆಲೆಯಲ್ಲಿ 10 ಕೆಜಿ ಸ್ಫೋಟಕಗಳ ಮತ್ತು ಭಾರೀ ಗುಂಡಿನ ದಾಳಿಯನ್ನು ತಡೆದುಕೊಳ್ಳಬಲ್ಲ ಸುರಕ್ಷಾ ಕವಚ ಹೊಂದಿರುವ ಶೆರ್ಪಾ ವಾಹನವನ್ನು ನಿಯೋಜಿಸಿದೆಯಾದರೂ ಅದು ಕ್ಯೂಆರ್‌ಟಿಗಾಗಿ ಸಣ್ಣ ವಾಹನಗಳನ್ನು ಬಯಸಿದೆ.
ದಾಳಿಯ ಸಂದರ್ಭದಲ್ಲಿ ಹಾನಿಯನ್ನು ಕನಿಷ್ಠಗೊಳಿಸಲು ನಾವು ಚುರುಕಾಗಿ ಕಾರ್ಯಾಚರಿಸಬೇಕಾಗುತ್ತದೆ. ನಮ್ಮ ಸಿಬ್ಬಂದಿಗಳನ್ನು ಅಪಾಯಕ್ಕೆ ಗುರಿಯಾಗಿಸದೆ ದಾಳಿಕೋರರನ್ನು ದಮನಿಸಲು ಗುಂಡು ನಿರೋಧಕ ವಾಹನ ನೆರವಾಗುತ್ತದೆ. ದಿನದ 24 ಘಂಟೆಯೂ ಗಸ್ತು ಕಾರ್ಯಕ್ಕೆ ಇಂತಹ ವಾಹನಗಳು ಅಗತ್ಯವಾಗಿವೆ. ಈಗ ನಮ್ಮ ಬಳಿ ಜಿಪ್ಸಿ ಇದೆ, ಆದರೆ ಅದು ತೆರೆದ ವಾಹನವಾಗಿರುವುದರಿಂದ ನಮ್ಮ ಕಮಾಂಡೋಗಳಿಗೆ ಸುರಕ್ಷತೆಯಿಲ್ಲ ಎಂದು ಸಿಐಎಸ್‌ಎಫ್‌ನ ಹೆಚ್ಚುವರಿ ಮಹಾ ನಿರ್ದೇಶಕ ಎಂ.ಎ.ಗಣಪತಿ ಹೇಳಿದರು.
ಸಿಐಎಸ್‌ಎಫ್ ಈಗಾಗಲೇ ತನ್ನ ಪ್ರಸ್ತಾವವನ್ನು ನಾಗರಿಕ ವಾಯುಯಾನ ಸುರಕ್ಷತಾ ಘಟಕಕ್ಕೆ ಸಲ್ಲಿಸಿದ್ದು, ಅದು ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಿಗೆ ಬರೆದಿದೆ.
ಪ್ರಸ್ತಾವಕ್ಕೆ ಹಸಿರು ನಿಶಾನೆ ಲಭಿಸಿದರೆ ದಿಲ್ಲಿ ಇಂತಹ ವಾಹನಗಳನ್ನು ಹೊಂದಲಿರುವ ಭಾರತದ ಮೊದಲ ವಿಮಾನ ನಿಲ್ದಾಣವಾಗಲಿದೆ. ಮುಂಬರುವ ದಿನಗಳಲ್ಲಿ ಮುಂಬೈ, ಚೆನ್ನೈ ಮತ್ತು ಇತರ ಪ್ರಮುಖ ವಿಮಾನ ನಿಲ್ದಾಣಗಳೂ ಗುಂಡು ನಿರೋಧಕ ವಾಹನಗಳನ್ನು ಪಡೆಯಲಿವೆ.
ಭಯೋತ್ಪಾದಕನೋರ್ವ ವಾಹನದಲ್ಲಿ ಅಡಗಿಕೊಂಡಿದ್ದ 26/11ರಂತಹ ದಾಳಿ ಸಂದರ್ಭದಲ್ಲಿ ಬಾಂಬ್ ಸ್ಫೋಟವನ್ನೂ ತಡೆದುಕೊಳ್ಳಬಲ್ಲ ವಾಹನಗಳು ಬೇಕಾಗುತ್ತವೆ. ದಿಲ್ಲಿ ದೇಶದಲ್ಲಿ ಅತ್ಯಂತ ಸೂಕ್ಷ್ಮ ವಿಮಾನ ನಿಲ್ದಾಣವಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ವಾಹನಗಳು ಅಗತ್ಯವಾಗಿವೆ ಎಂದು ಗಣಪತಿ ಹೇಳಿದರು.
ದಿಲ್ಲಿ ವಿಮಾನ ನಿಲ್ದಾಣದ ಭದ್ರತೆಗಾಗಿ 4,500 ಸಿಐಎಸ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.