ಗ್ರಾಹಕ ಇಲಾಖೆ, ಬಿಐಎಸ್, ಮೌಲ್ಯಮಾಪನ ಸಂಸ್ಥೆಯ ಜಂಟಿ ವಿಚಾರ ಸಂಕಿರಣಕ್ಕೆ ಯು.ಟಿ.ಖಾದರ್ ಸಲಹೆ

Update: 2017-11-22 13:30 GMT

ಹೊಸದಿಲ್ಲಿ, ನ. 22: ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್) ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಪ್ರಥಮ ಸಭೆ ಇಂದು ಹೊಸದಿಲ್ಲಿಯ ಕೃಷಿಭವನದಲ್ಲಿ ನಡೆಯಿತು.

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಭೆಯ ಅಧ್ಯಕ್ಷತೆ ವಹಿಸಿದರು. ಐಎಸ್ಐ ಗವರ್ನಿಂಗ್ ಬೋಡಿ ಕೌನ್ಸಿಲ್ ಸದಸ್ಯರಾದ ಕೇಂದ್ರ ವಿಜ್ಞಾನ, ತಂತ್ರಜ್ಞಾನ, ಭೂ ವಿಜ್ಞಾನ ರಾಜ್ಯ ಸಚಿವ ವೈ.ಎಸ್. ಚೌಧರಿ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಉತ್ತರ ಪ್ರದೇಶದ ಸಂಸದ, ಛತ್ತೀಸ್ ಗಢ ರಾಜ್ಯಸಭಾ ಸದಸ್ಯ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಖ್ಯ ಕಾರ್ಯದರ್ಶಿ ಉಪಸ್ಥಿತರಿದ್ದರು. ಐಎಸ್ಐ ಡೈರೆಕ್ಟರ್ ಗವರ್ನರ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

ಗ್ರಾಹಕ ಇಲಾಖೆ, ಬಿಐಎಸ್ ಸಂಸ್ಥೆ, ಮೌಲ್ಯಮಾಪನ ಇಲಾಖೆ ಈ ಮೂರರ ಮಧ್ಯೆ ನಿಯಮಗಳಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಗೊಂದಲವಿದೆ. ಆದ್ದರಿಂದ ಈ ಮೂರೂ ಸಂಸ್ಥೆಗಳನ್ನು ಒಟ್ಟುಗೂಡಿಸಿ ರಾಷ್ಟ್ರೀಯ ವಿಚಾರಸಂಕಿರಣ ನಡೆಸಿ ನಿಯಮಗಳಲ್ಲಿ ತಿದ್ದುಪಡಿ ತಂದು ಸರಳಗೊಳಿಸುವಂತೆ ಬಿಐಎಸ್ ಸದಸ್ಯ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಸಭೆಯಲ್ಲಿ ಸಲಹೆ ನೀಡಿದರು.

ಸಭೆ ಈ ಸಲಹೆಗೆ ಅನುಮೋದನೆ ನೀಡಿ ವಿಚಾರ ಸಂಕಿರಣ ನಡೆಸಲು ತೀರ್ಮಾನಿಸಿದೆ. ಮೊಬೈಲ್ ಹಾಗೂ ಪ್ಲಾಸ್ಟಿಕ್ ಆಟಿಕೆಗಳನ್ನು ಬಿಐಎಸ್ ವ್ಯಾಪ್ತಿಗೆ ಒಳಪಡಿಸಬೇಕೆಂಬ ಯು.ಟಿ.ಖಾದರ್ ಅವರ ಸೂಚನೆಯನ್ನು ಸಭೆ ಅಂಗೀಕರಿಸಿತು.

ಎರಡು ತಾಸು ನಡೆದ ಬಿಐಎಸ್ ಸಂಸ್ಥೆಯ ಪ್ರಥಮ ಸಭೆಯಲ್ಲಿ ಕಟ್ಟಡಗಳು, ಆಸ್ಪತ್ರೆ, ಶಾಲೆಗಳನ್ನು ಬಿಐಎಸ್ ವ್ಯಾಪ್ತಿಗೆ ತರುವುದು, ಹಲವಾರು ಜ್ಯುವೆಲ್ಲರಿಗಳಲ್ಲಿ ಬಿಐಎಸ್ 916 ಹಾಲ್ ಮಾರ್ಕ್ ನೀಡದೆ 14,18,20 ಕ್ಯಾರೆಟ್ ಚಿನ್ನಾಭರಣಗಳನ್ನು ಮಾರಾಟ ಮಾಡುವುದನ್ನು ತಡೆಗಟ್ಟುವುದು, ಹತ್ತು ಹಲವು ಜನೋಪಯೋಗಿ ಸಾಮಗ್ರಿಗಳನ್ನು ಬಿಐಎಸ್ ಒಳಗೆ ತರುವುದು ಮೊದಲಾದ ನಿರ್ಣಯಗಳನ್ನು ಪ್ರಥಮ ಸಭೆಯಲ್ಲಿ ಕೈಗೊಳ್ಳಲಾಯಿತು.

ಬಿಐಎಸ್ ಮಾಹಿತಿಯ ಸಿನೆಮಾ ಸಿಡಿಯನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News