ಪದ್ಮಾವತಿ ವಿವಾದ: ಹರ್ಯಾಣಕ್ಕೂ ವಿಸ್ತರಿಸಿದ ಪ್ರತಿಭಟನೆ
Update: 2017-11-22 19:11 IST
ಚಂಡಿಗಢ, ನ. 22: ದೇಶದ ಹಿಂದಿ ಭಾಷಿಕರಿರುವ ವಲಯದಾದ್ಯಂತ ಪದ್ಮಾವತಿ ಚಲನಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ ಹರ್ಯಾಣಕ್ಕೂ ವಿಸ್ತರಿಸಿದೆ. ಹರ್ಯಾಣದ ಐದು ಜಿಲ್ಲೆಗಳಲ್ಲಿ ಚಲನಚಿತ್ರದ ವಿರುದ್ಧ ಪ್ರತಿಭಟನೆ ಆರಂಭವಾಗಿದೆ.
ನಟಿ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆಗೆ ಹರ್ಯಾಣದ ಬಿಜೆಪಿ ನಾಯಕ ಸೂರಜ್ ಪಾಲ್ ಅಮು 10 ಕೋ. ರೂ. ಬಹುಮಾನ ಘೋಷಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಬಿಜೆಪಿ ಸೂರಜ್ ಪಾಲ್‌ಗೆ ಶೋಕಾಸ್ ನೋಟಿಸು ಜಾರಿ ಮಾಡಿದೆ.
ಆದರೆ, ಈಗ ವಿರೋಧ ಪಕ್ಷದ ನಾಯಕ ಅಭಯ್ ಸಿಂಗ್ ಚೌಟಾಲ, ವಿವಾದ ತಿಳಿಯಾಗುವ ವರೆಗೆ ಚಲನಚಿತ್ರ ಪ್ರದರ್ಶನ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.
ಚಲನಚಿತ್ರ ಪ್ರದರ್ಶನ ನಿಷೇಧಿಸುವಂತೆ ಆಗ್ರಹಿಸಿದ ರಜಪೂತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಹರ್ಯಾಣದ ಅಂಬಾಲ, ಕರ್ನಾಲ್, ಹಿಸ್ಸಾರ್, ಮಹೇಂದರ್‌ಗಢ ಹಾಗೂ ದಾದ್ರಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.