ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿ ಬಗ್ಗೆ ಬಿಸಿಸಿಐ-ಕ್ರೀಡಾ ಸಚಿವ ರಾಥೋಡ್ ಮಾತುಕತೆ

Update: 2017-11-22 18:17 GMT

ಹೊಸದಿಲ್ಲಿ, ನ.22: ಭಾರತದ ಕ್ರಿಕೆಟಿಗರಿಗೆ ಡೋಪಿಂಗ್ ಪರೀಕ್ಷೆ ನಡೆಸುವುದು ಹಾಗೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿ ಪುನಾರಂಭದ ಬಗ್ಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರೊಂದಿಗೆ ಬಿಸಿಸಿಐ ಮಾತುಕತೆ ನಡೆಸಿದೆ.

ಕ್ರೀಡಾ ಸಚಿವರ ಭೇಟಿಯ ವೇಳೆ ಬಿಸಿಸಿಐ ಅಧಿಕಾರಿಗಳು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆಡುವ ಕುರಿತು ಸರಕಾರದ ಅಭಿಪ್ರಾಯವನ್ನು ಪಡೆದಿದ್ದಾರೆೆ.

ಕ್ರೀಡಾ ಸಚಿವಾಲಯದ ಅಭಿಪ್ರಾಯ ಸ್ಪಷ್ಟವಾಗಿಲ್ಲದ ಕಾರಣ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ.

 ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ(ನಾಡಾ) ಭಾರತೀಯ ಕ್ರಿಕೆಟಿಗರನ್ನು ಉದ್ದೀಪನಾ ಮದ್ದು ಪರೀಕ್ಷೆಗೆ ಒಳಪಡಿಸಲು ಬಯಸಿತ್ತು. ಆದರೆ, ನಾಡಾದ ಬೇಡಿಕೆಯನ್ನು ಬಿಸಿಸಿಐ ತಿರಸ್ಕರಿಸಿದೆ. ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ (ವಾಡಾ)ದೊಂದಿಗೆ ಐಸಿಸಿ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನಾಡಾ ಭಾರತದ ಕ್ರಿಕೆಟಿಗರನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಬಿಸಿಸಿಐ ತರ್ಕ ಮಂಡಿಸಿದೆ.

  ಬಿಸಿಸಿಐ ಡಿ.9 ರಂದು ವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ)ಕರೆದಿದ್ದು ರಾಥೋಡ್ ಅವರೊಂದಿಗಿನ ಮಾತುಕತೆ ಹಾಗೂ ನಾಡಾ ವಿಚಾರವನ್ನು ತನ್ನ ಕಾರ್ಯಸೂಚಿಯಲ್ಲಿ ಸೇರಿಸಲು ನಿರ್ಧರಿಸಿದೆ. ‘‘ನಾವು ಕ್ರೀಡಾ ಸಚಿವರೊಂದಿಗೆ ನಾಡಾ ಹಾಗೂ ವಾಡಾದ ಬಗ್ಗೆ ಚರ್ಚಿಸಿದ್ದೆವು. ಬಿಸಿಸಿಐ ಡೋಪಿಂಗ್ ವಿರೋಧಿ ದಳದ ಕುರಿತು ಚೆನ್ನಾಗಿ ಅರಿತಿರುವ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಹಾಗೂ ಪ್ರಧಾನ ಪ್ರಬಂಧಕ(ಆಡಳಿತ, ಕ್ರೀಡಾಭಿವೃದ್ಧಿ)ಪ್ರೊ.ರತ್ನಾಕರ ಶೆಟ್ಟಿ ಅವರು ರಾಥೋಡ್‌ರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ 45 ನಿಮಿಷಗಳ ಕಾಲ ಚರ್ಚಿಸಿದ್ದಾರೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ‘‘ಕ್ರೀಡಾ ಸಚಿವರೊಂದಿಗೆ ಸೌಜನ್ಯದ ಭೇಟಿ ನಡೆಸಿದ್ದು, ಈ ಭೇಟಿಯು ರಾಥೋಡ್ ಕ್ರೀಡಾ ಸಚಿವರಾದಾಗಲೇ ನಿಗದಿಯಾಗಿತ್ತು. ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿ ಆಡುವ ಕುರಿತು ಚರ್ಚಿಸಲಾಗಿದೆ. ಪಾಕಿಸ್ತಾನದೊಂದಿಗೆ ಆಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಕ್ರೀಡಾ ಸಚಿವಾಲಯ ಮಾತ್ರವಲ್ಲ ಪ್ರಧಾನಮಂತ್ರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯ ಕೂಡ ನಿರ್ಧರಿಸಬೇಕಾಗಿದೆ’’ ಎಂದು ಇನ್ನೋರ್ವ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News