‘ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡೆಯಾಗಿ ಬೆಳೆಯಲಿ’

Update: 2017-11-22 18:23 GMT

ಹೊಸದಿಲ್ಲಿ, ನ.22: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಥಾನ ಪಡೆಯಬೇಕಾದರೆ ಅದನ್ನು ಹೆಚ್ಚು ದೇಶಗಳು ಆಡಬೇಕಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪೋಟಕ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು. ಸೈಂಟ್ ಮೊರಿಟ್ಝ್ ಐಸ್ ಕ್ರಿಕೆಟ್ ಅಕಾಡಮಿಯನ್ನು ಉದ್ಘಾಟಿಸಿ ಸೆಹ್ವಾಗ್ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಲ್ಲಿ ಒಟ್ಟು 105 ಸದಸ್ಯರಿದ್ದಾರೆ. ಈ ಪೈಕಿ 12 ಖಾಯಂ ಸದಸ್ಯರಾಗಿದ್ದಾರೆ.2024ರ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್‌ನ್ನು ಸೇರಿಸಲು ಐಸಿಸಿ ಶ್ರಮಿಸಬೇಕಾಗಿದೆ.

 1900ರಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಥಾನ ಪಡೆದಿತ್ತು. ಆದರೆ ಆ ಬಳಿಕ ಕ್ರಿಕೆಟ್ ಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಇಲ್ಲದಂತಾಗಿದೆ. ಕ್ರಿಕೆಟ್‌ನ್ನು ಹೆಚ್ಚು ದೇಶಗಳು ಆಡುವ ನಿಟ್ಟಿನಲ್ಲಿ ಐಸಿಸಿ ಪ್ರೋತ್ಸಾಹ ನೀಡಬೇಕು. ಖಾಯಂ ಸದಸ್ಯರ ಸಂಖ್ಯೆ 12 ಇದ್ದರೆ ಸಾಲದು. ಸದಸ್ಯರ ಸಂಖ್ಯೆ ಜಾಸ್ತಿಯಾಗಬೇಕು ಎಂದರು.

  ಸ್ವಿಟ್ಝರ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಕ್ರಿಕೆಟ್ ಆಟ ಬೆಳೆದಿಲ್ಲ. ಸ್ವಿಟ್ಝರ್‌ರ್ಲೆಂಡ್‌ನಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸೆಹ್ವಾಗ್ ಅವರು 2018ರ ಫೆಬ್ರವರಿಯಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಮಹೇಲ ಜಯವರ್ಧನೆ, ಶುಐಬ್ ಅಖ್ತರ್, ಡೇನಿಯಲ್ ವೆಟೋರಿ , ಮುಹಮ್ಮದ್ ಕೈಫ್ ಮತ್ತು ಗ್ರೇಮ್ ಸ್ಮಿತ್ ಜೊತೆ ಆಡಲಿದ್ದಾರೆ.

ಸ್ವಿಟ್ಝರ್ಲೆಂಡ್ ಖಾಯಂ ಸದಸ್ಯತ್ವ ಹೊಂದಿಲ್ಲ. ಆದರೆ ಎರಡು ಬಾರಿ ಚಳಿಗಾಲದ ಒಲಿಂಪಿಕ್ಸ್ ಕೂಟವನ್ನು ಆಯೋಜಿಸಿತ್ತು. ಮುಂದಿನ ವರ್ಷದ ಫೆ.8ಮತ್ತು 9ರಂದು ಸ್ವಿಟ್ಝರ್ಲೆಂಡ್‌ನಲ್ಲಿ ಐಸ್ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News