ಮಣಿಪಾಲ: ಕ್ರಿಸ್ಮಸ್ ಕೇಕ್‌ಗೆ ಫ್ರುಟ್ಸ್ ಮಿಕ್ಸಿಂಗ್

Update: 2017-11-23 15:16 GMT

ಉಡುಪಿ, ನ.23: ಮುಂಬರುವ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಂದರ್ಭಕ್ಕಾಗಿ ಸಾಂಪ್ರದಾಯಿಕ ಕೇಕ್ ಮಿಕ್ಸ್ ಕಾರ್ಯಕ್ರಮ ಗುರುವಾರ ಸಂಜೆ ಮಣಿಪಾಲದ ನೂತನ ವಾಕಾ ಕಟ್ಟಡದಲ್ಲಿ ಮಣಿಪಾಲದ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಮಣಿಪಾಲದ ವೆಲ್‌ಕಮ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿಸ್ಟ್ರೇಷನ್ ಹಾಗೂ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಜಂಟಿ ಆಶ್ರಯದಲ್ಲಿ ನಡೆದ ಕೇಕ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ನಟ್ಸ್ ಮತ್ತು ಡ್ರೈಪ್ರುಟ್ಸ್‌ಗಳನ್ನು ವಿವಿಧ ಬಗೆಯ ಮದ್ಯದಲ್ಲಿ ಕಲಸಿ ನೆನಸಿ ಇಡಲಾಯಿತು.

ಕೇಕ್ ಮಿಕ್ಸಿಂಗ್ ಉತ್ಸವ ವಿದೇಶಗಳಲ್ಲಿ ವಿಶೇಷವಾಗಿ ಯುರೋಪ್, ಇಂಗ್ಲೆಂಡ್ ಹಾಗೂ ಅಮೆರಿಕಗಳಲ್ಲಿ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ಕ್ರಿಸ್‌ಮಸ್‌ಗೆ ಇನ್ನೂ ತಿಂಗಳು ಇರುವಾಗಲೇ ರುಚಿಕರ ಕೇಕ್ ತಯಾರಿಗಾಗಿ ನಡೆಸುವ ಪೂರ್ವ ತಯಾರಿಯೇ ಈ ಕೇಕ್‌ಮಿಕ್ಸಿಂಗ್ ಎಂದು ವಾಗ್ಷಾದ ಉಪಪ್ರಾಂಶುಪಾಲ್ ಹಾಗೂ ಚೆಫ್ ತಿರು ಹಾಗೂ ಪ್ರಶಾಂತ್ ಮಾಹಿತಿ ನೀಡಿದರು.

ಇಂದು ಸುಮಾರು 150 ಕೆ.ಜಿ.ಯಷ್ಟು ಗೋಡಂಬಿ ಬೀಜ, ಒಣದ್ರಾಕ್ಷೆ, ಟೂಟಿ-ಫ್ರೂಟಿ, ಚೆರ್ರಿ, ಬಾದಾಮ್, ಅಲ್ಮೋಡ ಹಾಗೂ ಇತರ ಡ್ರೈ ಫ್ರುಟ್ಸ್‌ಗಳನ್ನು ರಮ್, ವೈನ್ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಮುಚ್ಚಿಟ್ಟು, ನಂತರ ಅದರಿಂದ ವೈವಿಧ್ಯಮಯ ಕೇಕ್ ತಯಾರಿಸಲಾಗುತ್ತದೆ. ಕೇಕ್‌ಮಿಕ್ಸಿಂಗ್ ಉಗಮ 17ನೇ ಶತಮಾನದಲ್ಲಾಯಿತು. ಇದು ಅಲ್ಲಿ ಕೊಯ್ಲಿನ ಕಾಲದಲ್ಲಿ ನಡೆಯುವ ಒಂದು ಉತ್ಸವವಾಗಿ ಆಚರಿಸಲ್ಪಡುತ್ತದೆ ಎಂದವರು ನುಡಿದರು.

ಕೇಕ್ ಮಿಕ್ಸ್‌ಗೆ ಮಣಿಪಾಲ ವಿವಿ ಚಾನ್ಸಲರ್ ಡಾ. ರಾಮದಾಸ್ ಪೈ ಅವರ ಪತ್ನಿ ವಸಂತಿ ಪೈ ಚಾಲನೆ ನೀಡಿದರು. ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಇಂದಿರಾ ಬಲ್ಲಾಳ್, ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು, ರಿಜಿಸ್ಟಾರ್ ಡಾ.ನಾರಾಯಣ ಸಭಾಹಿತ್, ವಾಗ್ಷಾದ ಪ್ರಾಂಶುಪಾಲ್ ಡಾ. ಪರ್ವತವರ್ಧಿನಿ ಗೋಪಾಲಕೃಷ್ಣ, ವ್ಯಾಲಿವ್ಯೆನ ಜನರಲ್ ಮ್ಯಾನೇಜರ್ ಉದಯ್ ಶರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News