ನಾಳೆಯಿಂದ ಉಡುಪಿಯಲ್ಲಿ 12ನೇ ಧರ್ಮಸಂಸದ್

Update: 2017-11-23 16:51 GMT

ಉಡುಪಿ, ನ.23: 12ನೇ ಧರ್ಮಸಂಸದ್ ನಾಳೆಯಿಂದ ಮೂರು ದಿನಗಳ ಕಾಲ ಉಡುಪಿಯ ಕಲ್ಸಂಕ ಬಳಿ ಇರುವ ರಾಯಲ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

1985ರ ಧರ್ಮಸಂಸದ್ ಉಡುಪಿಯಲ್ಲಿ ನಡೆದ ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಧರ್ಮಸಂಸದ್ ಇದಾಗಿದೆ. ಪ್ರಯಾಗದಲ್ಲಿ 2006ರಲ್ಲಿ 11ನೇ ಧರ್ಮಸಂಸದ್ ನಡೆದಿದ್ದು, ಇದೀಗ 11 ವರ್ಷಗಳ ನಂತರ 12ನೇ ಧರ್ಮಸಂಸದ್ ಉಡುಪಿಯಲ್ಲಿ ನಡೆಯುತ್ತಿದೆ. 1985ರ ಧರ್ಮಸಂಸದ್‌ನಲ್ಲಿ ಉತ್ತರ ಪ್ರದೇಶ ಸರಕಾರ ಅಯೋಧ್ಯೆಯ ರಾಮಮಂದಿರಕ್ಕೆ ಹಾಕಿದ್ದ ಬೀಗವನ್ನು ತೆರೆಯುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಾರಿಯ ಧರ್ಮಸಂಸದ್‌ನಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ಒಮ್ಮತದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ಧರ್ಮಸಂಸದ್‌ನ ಆಯೋಜಕರಾದ ವಿಶ್ವ ಹಿಂದು ಪರಿಷತ್‌ನ ಹಿರಿಯ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ದೇಶದ ಮೂಲೆಮೂಲೆಗಳಿಂದ ಆಗಮಿಸಿರುವ ಸಂತರು, ಸಾಧುಗಳು, ಮಠಾಧೀಶರು, ಪೀಠಾಧಿಶರು ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಈ ಎಲ್ಲಾ ಚರ್ಚೆಗಳಲ್ಲಿ ಕೇವಲ ಸಂತರು ಮಾತ್ರ ಭಾಗವಹಿ ಸುವುದು ಇನ್ನೊಂದು ವಿಶೇಷವಾಗಿದೆ. ಈ ಎಲ್ಲಾ ಗೋಷ್ಠಿಗಳಿಗೆ ಪತ್ರಕರ್ತರು, ರಾಜಕಾರಣಿಗಳು, ಸಾರ್ವಜನಿಕರು ಸೇರಿದಂತೆ ಬೇರೆ ಯಾರಿಗೂ ಪ್ರವೇಶ ನಿಷಿದ್ಧವಾಗಿದೆ.

ಧರ್ಮಸಂಸದ್‌ನ ಸಂಘಟಕ, ವಿಶ್ವಹಿಂದು ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌  ತೊಗಾಡಿಯಾ ಈಗಾಗಲೇ ಉಡುಪಿಗೆ ಆಗಮಿಸಿದ್ದಾರೆ. ಅದೇ ರೀತಿ ನೂರಾರು ಸಂಖ್ಯೆಯಲ್ಲಿ ಸಾಧುಸಂತರು, ಸಾಧ್ವಿಗಳು ಉಡುಪಿಗೆ ಬಂದಿಳಿದಿದ್ದಾರೆ. ದೇಶದಲ್ಲೇ ಇಷ್ಟೊಂದು ಸಂಖ್ಯೆಯ ಸಾಧು, ಸಂತರು, ಸಾಧ್ವಿಗಳು, ಮಠಾಧಿಪತಿಗಳು, ತಮ್ಮೆಲ್ಲಾ ಮತ-ಪಂಥದ ಭೇದಭಾವಗಳನ್ನು ಮರೆತು ಒಂದೇ ಕಡೆ ಸೇರುತ್ತಿರುವುದು ಇದೇ ಮೊದಲೆಂದು ಸ್ವಾಗತ ಸಮಿತಿಯ ಕಾರ್ಯದರ್ಶಿ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದರು. ಈ ಮೂಲಕ ಉಡುಪಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತಿದೆ ಎಂದವರು ಹರ್ಷ ವ್ಯಕ್ತಪಡಿಸಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕ್ರಮವಾಗಿ ಅ.24ರ ಉದ್ಘಾಟನಾ ಕಾರ್ಯಕ್ರಮ ಹಾಗೂ ಅ.26ರ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಘ ಪರಿವಾರದ ವಿವಿಧ ಘಟಕಗಳ ಹಿರಿಯ ನಾಯಕರು, ಹಲವು ಕೇಂದ್ರ ಸಚಿವರು ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News