ಮೂರು ದಿನಗಳ ಐತಿಹಾಸಿಕ ಧರ್ಮ ಸಂಸದ್‌ಗೆ ಚಾಲನೆ

Update: 2017-11-24 07:14 GMT

ಉಡುಪಿ, ನ.24: ವಿಶ್ವ ಹಿಂದು ಪರಿಷದ್ ಕರ್ನಾಟಕ ಮತ್ತು ಧರ್ಮ ಸಂಸದ್ ಸ್ವಾಗತ ಸಮಿತಿಯ ವತಿಯಿಂದ ಉಡುಪಿ ಕಲ್ಸಂಕದ ರಾಯಲ್ ಗಾರ್ಡನ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಐತಿಹಾಸಿಕ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಶ್ರೀನಾರಾಯಣ ಗುರು ಸಭಾ ಮಂಟಪದಲ್ಲಿ ಭರಣಯ್ಯ ವೇದಿಕೆಯಲ್ಲಿ ನಡೆದ ಧರ್ಮ ಸಂಸದ್‌ನ್ನು ಸುತ್ತೂರು ಸ್ವಾಮೀಜಿ ಉದ್ಘಾಟಿಸಿದರು. ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ದಿಕ್ಸೂಚಿ ಭಾಷಣ ಮಾಡಿದರು.

ಅಯೋಧ್ಯೆಯ ಡಾ.ರಾಮವಿಲಾಸ ದಾಸ ವೇದಂತಿ ಸ್ವಾಮೀಜಿ, ಹರಿದ್ವಾರದ ಸ್ವಾಮಿ ಚಿನ್ಮಯಾನಂದ ಸರಸ್ವತಿ, ಕಾಶಿ ಸೋಮೇಶ್ವರ ಪೀಠದ ಶ್ರೀಜಗದ್ಗುರು ನರೇಂದ್ರಾನಂದ ಸರಸ್ವತಿ, ಮಹಾಮಂಡಾಲೀಶ್ವೇರ ಡಾ.ಶಾಶ್ವತಾನಂದ ಸರಸ್ವತಿ ಕುರಕ್ಷೇತ್ರ, ಮುಂಬೈಯ ಡಾ.ರಾವುಲ ಬೊಂಜಿ ಸ್ವಾಮೀಜಿ, ಶ್ರೀಕಾಳಹಸ್ತೇಂದ್ರ ಸ್ವಾಮೀಜಿ, ರಾಮಚಂದ್ರಪುರ ಮಠದ ಶ್ರೀ ರಾಘ ವೇಶ್ವರ ಸ್ವಾಮೀಜಿ, ಉಡುಪಿಯ ಪುತ್ರಿಗೆ, ಸೋದೆ, ಕಾಣಿಯೂರು ಸ್ವಾಮೀಜಿ ಸೇರಿದಂತೆ 90 ಸಂತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು.

ಇದಕ್ಕೂ ಮೊದಲು ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪೇಜಾವರ ಸ್ವಾಮೀಜಿ ಮತ್ತು ವೀರೇಂದ್ರ ಹೆಗ್ದಡೆ ಅವರು ಮೋಹನ್ ಭಾಗವತ್ ಅವರಿಗೆ ಭಾರತಮಾತೆಯ ಸ್ಮರಣಿಕೆಯನ್ನು ಅರ್ಪಿಸಿದರು. ಬಳಿಕ ರಾಜಾಂಗಣದ ಎದುರು ಸ್ವಾಮೀಜಿಗಳ ಪಾದಪೂಜೆಯನ್ನು ನೆರವೇರಿಸಲಾಯಿತು. ಅಲ್ಲಿಂದ ಸಂತರ ಶೋಭಾಯಾತ್ರೆಯು ರಾಯಲ್ ಗಾರ್ಡನ್‌ವರೆಗೆ ನಡೆಯಿತು. ಇದರಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಸಂತರು ಪಾಲ್ಗೊಂಡಿದ್ದರು.
ಧರ್ಮಸಂಸದ್ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News