×
Ad

ಮಿಸ್‌ವರ್ಲ್ಡ್ ಮಾನುಷಿಗೆ ಮೂಲ ಗ್ರಾಮದ ಕೊಡುಗೆ ಏನು ಗೊತ್ತೇ?

Update: 2017-11-26 09:49 IST

ಬಹದ್ದೂರ್‌ಗಢ (ಜಜ್ಜಾರ್), ನ. 26: ಹರ್ಯಾಣದ ಬೊಮ್ಡೋಲಿ ಗ್ರಾಮಕ್ಕೆ ಈ ಚಳಿಗಾಲದ ಕುಳಿರ್ಗಾಳಿ ಬದಲಾವಣೆಯ ಪ್ರಬಲ ಸಂದೇಶವನ್ನು ಹೊತ್ತು ತಂದಿದೆ. ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಅವರ ಪೂರ್ವಜರ ಗ್ರಾಮವಾದ ಬೊಮ್ಡೋಲಿಯಲ್ಲಿ ಹಳೆಯ ಗೊಡ್ಡು ಸಂಪ್ರದಾಯವನ್ನು ಬಿಟ್ಟು, ಪ್ರಗತಿಪರ ಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವಸುಂದರಿಗೆ ವಿಶಿಷ್ಟ ಗೌರವ ಸಲ್ಲಿಸಲು ನಿರ್ಧರಿಸಿದ್ದಾರೆ.

20 ವರ್ಷದ ಈ ವೈದ್ಯಕೀಯ ವಿದ್ಯಾರ್ಥಿನಿ ಚೀನಾದಲ್ಲಿ ಸೌಂದರ್ಯ ಕಿರೀಟ ಧರಿಸುತ್ತಿದ್ದಂತೆ ಹರ್ಯಾಣ ಹಾಗೂ ದೆಹಲಿಯ 11 ಗ್ರಾಮಗಳನ್ನು ಒಳಗೊಳ್ಳುವ ಚಿಲ್ಲರ್- ಚೀಕಾರಾ ಕಾಪ್, ವಿವಾಹ ಸಂದರ್ಭದಲ್ಲಿ ಸಂಭ್ರಮದಿಂದ ಗುಂಡು ಹಾರಿಸುವುದನ್ನು ನಿಷೇಧಿಸಿದೆ. ಪುರುಷ ಪ್ರಾಬಲ್ಯ ಸಮಾಜದ ಸಂಪ್ರದಾಯವಾದ ಇದರಿಂದ ಸಂಭವಿಸುವ ಅವಗಢದಲ್ಲಿ ಎಷ್ಟೋ ಮಂದಿ ಜೀವ ಕಳೆದುಕೊಳ್ಳುತ್ತಾರೆ ಇಲ್ಲವೇ ಗಾಯಗೊಳ್ಳುತ್ತಾರೆ ಎಂಬ ಕಾರಣಕ್ಕೆ ಇದನ್ನು ನಿಷೇಧಿಸಲಾಗಿದೆ.

ಅಂತೆಯೆ ವಿವಾಹ ಸಂದರ್ಭದಲ್ಲಿ ಅಬ್ಬರದ ಡಿಜೆ ಸಂಗೀತವನ್ನೂ ನಿಷೇಧಿಸಲಾಗಿದೆ. ಇದು ಅಧಿಕ ವೆಚ್ಚಕ್ಕೆ ಕಾರಣವಾಗುತ್ತಿದೆ ಹಾಗೂ ಕೆಲವೊಮ್ಮೆ ತೊಂದರೆ ಸೃಷ್ಟಿಸುವವರು ಇಡೀ ಸಡಗರವನ್ನೇ ಕಿತ್ತುಕೊಳ್ಳಲು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. "ಮಾನುಷಿ ಗೆಲುವು ನಮ್ಮ ಹೆಮ್ಮೆ. ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಬದಲಾವಣೆಗೆ ನಾವು ಮುಂದಾಗಿದ್ದೇವೆ. ನಮ್ಮ ಈ ನಿರ್ಧಾರದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ" ಎಂದು ಕನ್ಹೋದ್ ಗ್ರಾಮದ ಗುಲಾಬ್‌ಸಿಂಗ್ ಚಿಕಾರಾ ಹೇಳಿದ್ದಾರೆ.

ಸಂಭ್ರಮದ ಉತ್ಸವವಾದ ಮದುವೆ ಎಷ್ಟೋ ಕುಟುಂಬಗಳನ್ನು ಸಾಲದ ಕೂಪಕ್ಕೆ ತಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News