×
Ad

ಗುಜರಾತ್ ಕೇಂದ್ರೀಯ ವಿವಿ ಚುನಾವಣೆ: ಎಬಿವಿಪಿಗೆ ಹೀನಾಯ ಸೋಲು

Update: 2017-11-26 21:36 IST

ಗಾಂಧೀನಗರ, ನ.26: ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿವಿ(ಜೆಎನ್‌ಯು) ಮತ್ತು ದಿಲ್ಲಿ ವಿವಿಗೆ ನಡೆದ ಚುನಾವಣೆಯಲ್ಲಿ ಸೋಲುಂಡಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್(ಎಬಿವಿಪಿ)ಗೆ ಇದೀಗ ಗುಜರಾತ್‌ನಲ್ಲೂ ಮುಖಭಂಗವಾಗಿದೆ.

   ಗುಜರಾತ್ ಕೇಂದ್ರೀಯ ವಿವಿಯ ವಿದ್ಯಾರ್ಥಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಎಬಿವಿಪಿಗೆ ಭಾರೀ ಅಂತರದ ಸೋಲಾಗಿದೆ. ವಿವಿಯ ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್‌ನ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ದಿಲೀಪ್ ಕುಮಾರ್ ಮತ್ತು ಅರವಿಂದ್ ಗೆಲುವಿನ ನಗೆ ಬೀರಿದ್ದಾರೆ. ದಲಿತ, ಎಡಪಕ್ಷಗಳ ಸಂಘಟನೆ ಮತ್ತು ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಚುನಾವಣೆಯಿಂದ ಹಿಂದೆ ಸರಿದಿದ್ದರೂ ಎಬಿವಿಪಿ ವಿರುದ್ಧ ಪ್ರಚಾರ ನಡೆಸಿದ್ದವು.

ಲಿಂಗ್ಡೊ ಸಮಿತಿಯ ಶಿಫಾರಸ್ಸಿನ ಮೇರೆಗೆ ಗುಜರಾತ್ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಯಿಲ್ಲ. ಬದಲು ಇಲ್ಲಿ ವಿದ್ಯಾರ್ಥಿ ಸಮಿತಿಯಿದೆ.

 ಗುಜರಾತ್ ಕೇಂದ್ರೀಯ ವಿವಿ ಚುನಾವಣೆಯ ಫಲಿತಾಂಶವು ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವ ಸಂಕೇತವಾಗಿದ್ದು ಗುಜರಾತ್‌ನ ಯುವಜನತೆ ಬಿಜೆಪಿಯಿಂದ ದೂರ ಸರಿಯುತ್ತಿರುವುದು ಸ್ಪಷ್ಟವಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಜಂಟಿ ಕಾರ್ಯದರ್ಶಿ , ಅಖಿಲಭಾರತ ಪ್ರಗತಿಪರ ಮಹಿಳಾ ಸಂಘಟನೆ(ಎಐಪಿಡಬ್ಲೂಎ)ಯ ಕಾರ್ಯದರ್ಶಿ ಕವಿತಾ ಕೃಷ್ಣನ್ ಹೇಳಿದ್ದಾರೆ.

 ವಾರಣಾಸಿಯ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ, ದಿಲ್ಲಿಯ ಜೆಎನ್‌ಯು ಹಾಗೂ ದಿಲ್ಲಿ ವಿವಿ ವಿದ್ಯಾರ್ಥಿ ಸಂಘಟನೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಬಿವಿಪಿ ಭಾರೀ ಮುಖಭಂಗಕ್ಕೆ ಒಳಗಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News