ನೋಟು ರದ್ದತಿ ಬಳಿಕ ಈ ಬ್ಯಾಂಕ್ ನಲ್ಲಿ ಜಮೆಯಾದ 15 ಕೋಟಿ ರೂ. ‘ಬೇನಾಮಿ’!
ಹೊಸದಿಲ್ಲಿ, ನ.26: ಕೇಂದ್ರ ಸರಕಾರ ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿದ ಬಳಿಕ ದಿಲ್ಲಿಯ ಬ್ಯಾಂಕೊಂದರ ಖಾತೆಯಲ್ಲಿ ಜಮೆ ಮಾಡಲಾಗಿದ್ದ 15.39 ಕೋಟಿ ರೂ.ಗಳನ್ನು ಬೇನಾಮಿ ಆಸ್ತಿ ಎಂದು ವಿಶೇಷ ನ್ಯಾಯಾಲಯವೊಂದು ಘೋಷಿಸಿದೆ. ಜಮೆ ಮಾಡಿದ ವ್ಯಕ್ತಿ ಹಾಗೂ ಹಣದ ಮಾಲಿಕ ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಕಾಳಧನದ ವಿರುದ್ಧ ಕಾರ್ಯಾಚರಣೆಯ ಅಂಗವಾಗಿ ಆದಾಯ ತೆರಿಗೆ ಇಲಾಖೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕಿನ ದಿಲ್ಲಿಯ ಕೆ.ಜಿ.ಮಾರ್ಗ ಶಾಖೆಯಲ್ಲಿ ರಮೇಶ್‌ಚಂದ್ರ ಶರ್ಮ ಎಂಬ ವ್ಯಕ್ತಿ ಮೂರು ಸಂಸ್ಥೆಯ ಹೆಸರಲ್ಲಿರುವ ಖಾತೆಯಲ್ಲಿ 15,93,39,136 ನಗದು ಹಣವನ್ನು (500 ರೂ. ಮತ್ತು 1,000 ರೂ. ನೋಟುಗಳು) ಜಮೆ ಮಾಡಿರುವುದನ್ನು ಪತ್ತೆ ಹಚ್ಚಿತ್ತು.
ಹೀಗೆ ಹಣವನ್ನು ಜಮೆ ಮಾಡಿದ ತಕ್ಷಣವೇ, ಸರಿಯಾದ ಮಾಹಿತಿ ನೀಡಲಾಗದ ಕೆಲ ವ್ಯಕ್ತಿಗಳ ಹೆಸರಿನಲ್ಲಿ ಡಿಮಾಂಡ್ ಡ್ರಾಫ್ಟ್‌ಗಳನ್ನು ನೀಡುವ ಮೂಲಕ ಈ ಹಣವನ್ನು ಸಕ್ರಮಗೊಳಿಸುವ ಪ್ರಯತ್ನ ನಡೆದಿದ್ದು, ಇದನ್ನು ತಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಡಿಡಿಗಳನ್ನು ನಿಷ್ಕ್ರಿಯಗೊಳಿಸಿ, ಈ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಲ್ಲದೆ ಅದರಲ್ಲಿದ್ದ ಹಣವನ್ನು ಬೇನಾಮಿ ಎಂದು ಘೋಷಿಸಿದ್ದರು.
ಅದರಂತೆ 2016ರ ನವೆಂಬರ್ 1ರಂದು ಜಾರಿಗೆ ಬಂದಿರುವ ಬೇನಾಮಿ ವ್ಯವಹಾರ(ಪ್ರತಿಬಂಧ) ಕಾಯ್ದೆ 2016ರಡಿ, ಈ ಹಣವನ್ನು ಬೇನಾಮಿ ಆಸ್ತಿ ಎಂದು ಘೋಷಿಸಲಾಗಿದೆ . ಈ ಕಾಯ್ದೆ ಜಾರಿಗೆ ಬಂದಂದಿನಿಂದ ವಿಚಾರಣೆಗೆ ದಾಖಲಾಗಿರುವ ಐದು ಪ್ರಕರಣದಲ್ಲಿ ತೀರ್ಪು ಘೋಷಣೆಯಾಗಿರುವ ಪ್ರಪ್ರಥಮ ಪ್ರಕರಣ ಇದಾಗಿದೆ.
ಪ್ರಕರಣ ದಾಖಲಾದಂದಿನಿಂದ ಶರ್ಮ ನಾಪತ್ತೆಯಾಗಿದ್ದಾರೆ ಮತ್ತು ವಿಚಾರಣೆಗೆ ನಿರಂತರ ಗೈರುಹಾಜರಾಗಿದ್ದಾರೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. 2006-07ರಲ್ಲಿ ಶರ್ಮ 3 ಲಕ್ಷ ರೂ. ಆದಾಯ ಘೋಷಿಸಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದೆ.