ಲಾಲೂಪ್ರಸಾದ್ ಝಡ್ ಪ್ಲಸ್ ಭದ್ರತೆ ವಾಪಾಸು ಪಡೆದ ಕೇಂದ್ರ

Update: 2017-11-27 13:09 GMT

 ಹೊಸದಿಲ್ಲಿ, ನ.27: ಗಣ್ಯರಿಗೆ ಒದಗಿಸಲಾಗುತ್ತಿರುವ ಭದ್ರತೆಯ ಬಗ್ಗೆ ಇತ್ತೀಚೆಗೆ ಪುನರಾವಲೋಕನ ನಡೆಸಿದ ಬಳಿಕ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್‌ಗೆ ಒದಗಿಸಲಾಗಿದ್ದ ‘ಝಡ್ ಪ್ಲಸ್’(ಅತೀ ಗಣ್ಯ ವ್ಯಕ್ತಿಗಳಿಗೆ ಎನ್‌ಎಸ್‌ಜಿ ಬ್ಲಾಕ್‌ಕ್ಯಾಟ್ ಕಮಾಂಡೊಗಳಿಂದ ಭದ್ರತೆ)ಯನ್ನು ವಾಪಾಸು ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದೆ ಲಾಲೂಪ್ರಸಾದ್‌ಗೆ ‘ಝಡ್’ ಶ್ರೇಣಿಯ ಭದ್ರತೆ ಒದಗಿಸಲಾಗುವುದು. ಈ ಶ್ರೇಣಿಯ ಪ್ರಕಾರ ಸಿಆರ್‌ಪಿಎಫ್‌ನ ಸಶಸ್ತ್ರ ಕಮಾಂಡೊ ದಳ ಲಾಲೂಪ್ರಸಾದ್‌ಗೆ ಭದ್ರತೆ ಒದಗಿಸಲಿದೆ. ಅಲ್ಲದೆ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್‌ರಾಮ್ ಮಾಂಜಿಗೆ ಒದಗಿಸಲಾಗಿದ್ದ ‘ಝಡ್ ಪ್ಲಸ್’ ಸಿಆರ್‌ಪಿಎಫ್ ವಿಐಪಿ ಭದ್ರತೆಯನ್ನು ಸಂಪೂರ್ಣ ಹಿಂಪಡೆಯಲಾಗಿದೆ. ಅವರಿಗೆ ಇನ್ನುಮುಂದೆ ರಾಜ್ಯ ಪೊಲೀಸರು ಭದ್ರತೆ ಒದಗಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಗಣ್ಯ ವ್ಯಕ್ತಿಗಳಿಗೆ ಒದಗಿಸಲಾಗಿದ್ದ ಸರಕಾರಿ ಭದ್ರತೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಪುನರಾವಲೋಕನ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News