×
Ad

ವಿದ್ಯಾಭ್ಯಾಸ ಮುಂದುವರಿಸಲು ಹಾದಿಯಾ ಸೇಲಂಗೆ :ಸುಪ್ರೀಂ ಕೋರ್ಟ್ ಆದೇಶ

Update: 2017-11-27 20:31 IST

► ಬಿಎಚ್‌ಎಂಎಸ್ ಶಿಕ್ಷಣ ಮುಂದುವರಿಸಲು ತಮಿಳುನಾಡಿನ ಸೇಲಂಗೆ ತೆರಳಲು ಅವಕಾಶ.

► ಸ್ಥಳೀಯ ಪೋಷಕರಾಗಿ ವೈದ್ಯಕೀಯ ಕಾಲೇಜಿನ ಡೀನ್ ನಿಯೋಜನೆ.

► ಮರು ದಾಖಲಿಸಿಕೊಳ್ಳುವಂತೆ, ಹಾಸ್ಟೆಲ್ ಸೌಲಭ್ಯ ನೀಡುವಂತೆ ವಿ.ವಿ.ಗೆ ನಿರ್ದೇಶನ.

ಹೊಸದಿಲ್ಲಿ, ನ. 27: ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ ಮುಸ್ಲಿಂ ಯುವಕನನ್ನು ವಿವಾಹವಾದ 24 ವರ್ಷದ ಹಾದಿಯಾ ತನ್ನ ಹೋಮಿಯೋಪತಿ ವಿದ್ಯಾಭ್ಯಾಸ ಪೂರ್ಣಗೊಳಿಸಲು ತಮಿಳುನಾಡಿನ ಸೇಲಂಗೆ ಹಿಂದಿರುಗುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಹಾದಿಯಾ ಅವರಿಗೆ ಭದ್ರತೆ ನೀಡುವಂತೆ ಹಾಗೂ ಆದಷ್ಟು ಬೇಗ ಸೇಲಂಗೆ ತೆರಳುವುದನ್ನು ಖಾತರಿಪಡಿಸುವಂತೆ ಕೇರಳ ಪೊಲೀಸರಿಗೆ ನಿರ್ದೇಶಿಸಿದೆ.

 ಸೇಲಂ ಮೂಲದ ಹೋಮಿಯೋಪಥಿ ಕಾಲೇಜಿನ ಡೀನ್ ಅವರನ್ನು ಹಾದಿಯಾ ಅವರ ಪಾಲಕರಾಗಿ ಪೀಠ ನಿಯೋಜಿಸಿದೆ ಹಾಗೂ ಯಾವುದೇ ಸಮಸ್ಯೆ ಉಂಟಾದರೆ ನ್ಯಾಯಾಲಯ ಸಂಪರ್ಕಿಸುವ ಸ್ವಾತಂತ್ರಯವನ್ನು ಡೀನ್ ಅವರಿಗೆ ನೀಡಿದೆ.

ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವನ್ನು ಕೂಡ ಒಳಗೊಂಡ ಪೀಠ, ಹಾದಿಯಾ ಅವರನ್ನು ಮರು ದಾಖಲು ಮಾಡಿಕೊಳ್ಳುವಂತೆ ಹಾಗೂ ಹಾಸ್ಟೆಲ್ ಸೌಲಭ್ಯ ನೀಡುವಂತೆ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶಿಸಿದೆ.

ಸುಮಾರು 2 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಹಾದಿಯಾ, ತಾನು ಪತಿ ಶಫಿನ್ ಜಹಾನ್ ಅವರೊಂದಿಗೆ ತೆರಳುವುದಾಗಿ ತಿಳಿಸಿದ್ದಾರೆ.

ಹಾದಿಯಾ ಹಾಗೂ ಶಫಿನ್ ಜಹಾನ್ ವಿವಾಹ ಅನೂರ್ಜಿತಗೊಳಿಸಿ ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಶಫಿನ್ ಜಹಾನ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವರ್ಷ ಜನವರಿಯ ಮೂರನೆ ವಾರದಲ್ಲಿ ನಡೆಸಲಿದೆ.

ಪ್ರಕರಣದ ಕುರಿತಂತೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಿದ ಆದೇಶವನ್ನು ಹಿಂದೆಗೆಯುವಂತೆ ಕೋರಿ ಶಾಫಿನ್ ಜಹಾನ್ ಸೆಪ್ಟಂಬರ್ 20ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

‘‘ನಾನು ನನ್ನ ಪತಿಯನ್ನು ಭೇಟಿಯಾಗಲು ಬಯಸುತ್ತೇನೆ. ನನ್ನ ಶಿಕ್ಷಣ ಪೂರ್ಣಗೊಳಿಸಲು ಬಯಸುತ್ತೇನೆ. ನನ್ನ ನಂಬಿಕೆಗೆ ಅನುಗುಣವಾಗಿ ಜೀವಿಸಲು, ಉತ್ತಮ ಪ್ರಜೆಯಾಗಲು ಬಯಸುತ್ತೇನೆ’’

 ಹಾದಿಯಾ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News