ರಾಜೀನಾಮೆ ನೀಡಿದ ಪಾಕ್ ಕಾನೂನು ಸಚಿವ: ಪ್ರತಿಭಟನೆ ವಾಪಸ್

Update: 2017-11-27 15:58 GMT

ಇಸ್ಲಾಮಾಬಾದ್, ನ. 27: ಪ್ರತಿಭಟನಕಾರರ ಬೇಡಿಕೆಗೆ ಮಣಿದ ಪಾಕಿಸ್ತಾನದ ಕಾನೂನು ಸಚಿವ ಜಾಹಿದ್ ಹಮೀದ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಅವರ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿ ಇಸ್ಲಾಮಾಬಾದ್ ಮತ್ತು ದೇಶಾದ್ಯಂತ ನಡೆಯುತ್ತಿದ್ದ ಹಿಂಸಾತ್ಮಕ ಪ್ರತಿಭಟನೆ ಕೊನೆಗೊಂಡಿದೆ.

ಸಚಿವರು ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ಸರಕಾರಿ ಮಾಧ್ಯಮಗಳು ಸೋಮವಾರ ಮುಂಜಾನೆ ವರದಿ ಮಾಡಿದ ಬಳಿಕ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಖಾದಿಮ್ ಹುಸೈನ್ ರಿಝ್ವಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.

ತನ್ನ ಸಂಘಟನೆಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂಬ ಬಗ್ಗೆ ಸೇನೆ ತನಗೆ ಭರವಸೆ ನೀಡಿದೆ ಎಂದು ರಿಝ್ವಿ ತಿಳಿಸಿದರು.

‘‘ಸೇನಾ ಮುಖ್ಯಸ್ಥರ ಭರವಸೆಯಂತೆ ನಾವು ಧರಣಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ’’ ಎಂದು ಸುಮಾರು 2,500 ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಸಚಿವ ಹಮೀದ್ ವಿರುದ್ಧ ಫತ್ವಾ ಹೊರಡಿಸುವ ಪ್ರಸ್ತಾಪವನ್ನು ತನ್ನ ಗುಂಪು ಹಿಂದಕ್ಕೆ ಪಡೆದುಕೊಂಡಿದೆ ಹಾಗೂ ರಸ್ತೆಗಳು ಮತ್ತು ಶಾಲೆಗಳು ತೆರೆಯಬೇಕೆಂದು ಅದು ಕರೆ ನೀಡುತ್ತದೆ ಎಂದರು.

ಈ ಧರ್ಮಾಧಾರಿತ ಸಂಘಟನೆಯು ನವೆಂಬರ್ 6ರಿಂದ ಇಸ್ಲಾಮಾಬಾದ್‌ಗೆ ಹೋಗುವ ಪ್ರಮುಖ ಹೆದ್ದಾರಿಯಲ್ಲಿ ಧರಣಿ ನಡೆಸಿ ಅದನ್ನು ಮುಚ್ಚಿತ್ತು.

ಚುನಾಯಿತ ಪ್ರತಿನಿಧಿಗಳು ತೆಗೆದುಕೊಳ್ಳಬೇಕಾದ ಪ್ರಮಾಣವಚನಕ್ಕೆ ತಿದ್ದುಪಡಿ ತರುವ ವಿಧೇಯಕವೊಂದನ್ನು ಕಾನೂನು ಸಚಿವರು ಮಂಡಿಸಿದ್ದರು. ಆದರೆ, ಅದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಲೇ ಅದನ್ನು ತಕ್ಷಣ ಹಿಂದಕ್ಕೆ ಪಡೆಯಲಾಗಿತ್ತು. ಆದಾಗ್ಯೂ, ಅದಕ್ಕಾಗಿ ಕಾನೂನು ಸಚಿವರ ತಲೆದಂಡವನ್ನು ರಿಝ್ವಿಯ ಸಂಘಟನೆ ಬಯಸಿತ್ತು.

7 ಸಾವು, ನೂರಾರು ಮಂದಿಗೆ ಗಾಯ

ಶನಿವಾರ ಧರಣಿ ನಿರತರನ್ನು ತೆರವುಗೊಳಿಸಲು ಭದ್ರತಾ ಪಡೆಗಳು ಮುಂದಾದಾಗ ನಡೆದ ಹಿಂಸಾಚಾರದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಹಿಂಸಾಚಾರವು ಕರಾಚಿ ಮತ್ತು ಲಾಹೋರ್ ಸೇರಿ ದೇಶದ ಇತರ ನಗರಗಳಿಗೂ ವ್ಯಾಪಿಸಿತ್ತು.

ಬಳಿಕ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೇನೆಯನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News