ಬಾಲಿ ದ್ವೀಪದ ಪರ್ವತದಲ್ಲಿ ಜ್ವಾಲಾಮುಖಿ ಲಕ್ಷಣ: 40,000 ಮಂದಿ ಸ್ಥಳಾಂತರ

Update: 2017-11-27 16:06 GMT

ಜಕಾರ್ತ (ಇಂಡೋನೇಶ್ಯ), ನ. 27: ಇಂಡೋನೇಶ್ಯದ ಬಾಲಿ ದ್ವೀಪದ ಜ್ವಾಲಾಮುಖಿ ಮೌಂಟ್ ಅಗಂಗ್ ಹೊಗೆಯುಗುಳಲು ಆರಂಭಿಸಿರುವ ಹಿನ್ನೆಲೆಯಲ್ಲಿ, ಸುಮಾರು 40,000 ಸ್ಥಳೀಯರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ, ಆದರೆ ಇನ್ನೂ ಸಾವಿರಾರು ಜನರನ್ನು ಸ್ಥಳಾಂತರಿಸಬೇಕಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.

ಸೋಮವಾರ ಜ್ವಾಲಾಮುಖಿ ಸ್ಫೋಟ ಸಾಧ್ಯತೆಯ ಬಗ್ಗೆ ಇಂಡೋನೇಶ್ಯ ಗರಿಷ್ಠ ಎಚ್ಚರಿಕೆಯನ್ನು ಹೊರಡಿಸಿದೆ.

 ಜ್ವಾಲಾಮುಖಿ ಪರ್ವತದಿಂದ 3 ಕಿ.ಮೀ. ಎತ್ತರದವರೆಗೆ ಬಿಳಿ ಮತ್ತು ಬೂದು ಬಣ್ಣಗಳ ಬೂದಿ ಮಿಶ್ರಿತ ಹೊಗೆ ಚಿಮ್ಮುತ್ತಿದೆ. ಮಣ್ಣುಮಿಶ್ರಿತ ಜ್ವಾಲಾಮುಖಿ ಅವಶೇಷಗಳು ಮತ್ತು ‘ಲಹರ್’ ಎಂದು ಕರೆಯಲ್ಪಡುವ ನೀರು ಬೆಟ್ಟದಿಂದ ಇಳಿದು ಬರುತ್ತಿದೆ.

‘‘ಜ್ವಾಲಾಮುಖಿ ಬೃಹತ್ತಾಗಿ ಸ್ಫೋಟಿಸುವ ಸಾಧ್ಯತೆಯಿರುವುದರಿಂದ ತುರ್ತಾಗಿ ಸ್ಥಳಾಂತರಗೊಳ್ಳುವಂತೆ ಅಪಾಯ ವಲಯದಲ್ಲಿರುವ ಜನರಿಗೆ ನಾವು ಸೂಚನೆ ನೀಡುತ್ತಿದ್ದೇವೆ’’ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುಟೊಪೊ ಹೇಳಿದರು.

ಜ್ವಾಲಾಮುಖಿ ಪರ್ವತದ ಸುತ್ತಲಿನ 8-10 ಕಿ.ಮೀ. ಅಪಾಯ ವಲಯದಲ್ಲಿರುವ ಸುಮಾರು 1 ಲಕ್ಷ ಜನರ ಪೈಕಿ 40,000 ಮಂದಿ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ ಎಂದರು.

ವಿಮಾನ ನಿಲ್ದಾಣ ಬಂದ್; ಸಿಕ್ಕಿಹಾಕಿಕೊಂಡ ಸಾವಿರಾರು ಪ್ರಯಾಣಿಕರು

ಜ್ವಾಲಾಮುಖಿಯಿಂದ ಹೊರಸೂಸುತ್ತಿರುವ ದಟ್ಟ ಹೊಗೆಯ ಹಿನ್ನೆಲೆಯಲ್ಲಿ ಬಾಲಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಿರುವುದರಿಂದ ಸಾವಿರಾರು ಪ್ರಯಾಣಿಕರು ಪ್ರವಾಸಿ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ವಿಮಾನ ನಿಲ್ದಾಣದ ವಾಯುಪ್ರದೇಶದಲ್ಲಿ ಬೂದಿ ಹರಡಿಕೊಂಡಿರುವುದರಿಂದ ಹಾಗೂ ಜ್ವಾಲಮುಖಿ ಸ್ಫೋಟಕ್ಕೆ ಸಂಬಂಧಿಸಿ ಸರಕಾರ ಗರಿಷ್ಠ ಎಚ್ಚರಿಕೆಯನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಸೋಮವಾರ ಮುಂಜಾನೆಯಿಂದ ಮುಚ್ಚಲಾಗಿದೆ.

445 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದ್ದು, ಸುಮಾರು 59,000 ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News