ಟೆಲಿವಿಶನ್ ಎಂಬ ಮಾಟಗಾರ

Update: 2017-11-28 18:51 GMT

1984-85ರ ಆಸುಪಾಸಿನಲ್ಲಿ ಟಿವಿ ಎನ್ನುವ ಮಾಯಾ ಪೆಟ್ಟಿಗೆ ನನ್ನೂರಿಗೂ ಬಂತು. ನನ್ನ ಮನೆಗಲ್ಲ. ಸುತ್ತಲಿನ ಪುನರ್ವಸತಿ ವಲಯದ ನಿವಾಸಿಗಳ ಮನೆಯಲ್ಲೂ ಅಲ್ಲ. ಸರಕಾರದ ಖಾಲಿ ಜಾಗಗಳಲ್ಲಿ ಮನೆ ಕಟ್ಟಿಕೊಂಡ ಬಡವರ ಮನೆಗಳಿಗೆ ಟಿವಿ ಬಂತು. ಅವರ ಮನೆಗಳು ಸಕ್ರಮವಾಗಿರಬಹುದು. ಮನೆ ನಂಬ್ರ ದೊರೆತು ರೇಷನ್ ಕಾರ್ಡ್ ಇರಬಹುದು. ಸಾರ್ವಜನಿಕ ನಳ್ಳಿ ನೀರಿನ ವ್ಯವಸ್ಥೆಯಂತೂ ಇದೆ. ಆದರೆ ಈ ಮನೆಯವರಿಗೆ ಶೌಚಾಲಯವಿಲ್ಲದೆ ಅವರು ಇನ್ನುಳಿದ ಖಾಲಿ ಜಾಗಗಳನ್ನು ಶೌಚಕ್ಕಾಗಿ ಬಳಸುತ್ತಿದ್ದುದು ಸರಿಯಲ್ಲ ಎಂಬ ತಿಳುವಳಿಕೆ ಯಾರು ಕೊಡಬೇಕು. ಅಕ್ರಮವಾಗಿ ಕಟ್ಟಿಕೊಂಡ ಮನೆಯನ್ನು ಬಡವರು ಎನ್ನುವ ಕಾರಣಕ್ಕಾಗಿ ಸಕ್ರಮ ಮಾಡಿಕೊಳ್ಳುವ ವೇಳೆ ಆಡಳಿತ ವ್ಯವಸ್ಥೆ ಇಂತಹ ಆರೋಗ್ಯದ ನಿಯಮಗಳನ್ನು ಕಡ್ಡಾಯಗೊಳಿಸುವುದು ಅವಶ್ಯವಲ್ಲವೇ? ಸಾಮಾಜಿಕವಾದ

ಇಂತಹ ಸಾಮಾನ್ಯ ನಿಯಮಗಳನ್ನು ಅರಿಯದಿದ್ದರೂ ಅಥವಾ ಅದರ ಅಗತ್ಯವನ್ನು ಮನಗಾಣದಿದ್ದರೂ ದೇವರು, ಧರ್ಮಗಳ ಬಗ್ಗೆ ಮತ್ತು ವೈಯಕ್ತಿಕ ಪ್ರತಿಷ್ಠೆಗೆ ಅವರು ನೀಡುವ ಮಹತ್ವದ ಕುರಿತಷ್ಟೇ ನನ್ನ ತಕರಾರು. ಇಂತಹ ಒಂದು ಮನೆಯವರು ಶಬರಿಮಲೆಯ ಅಯ್ಯಪ್ಪನ ಭಕ್ತರಾಗಿ ವ್ರತಧಾರಿಗಳಾಗಿ ಇರುಮುಡಿ ಹೊತ್ತುಕೊಂಡು ನಡೆದೇ ಹೋಗಿ ಬರುತ್ತಿದ್ದವರು ಮುಂದಿನ ವರ್ಷಗಳಲ್ಲಿ ವಾಹನಗಳಲ್ಲಿ ಹೋಗಿ ಬರುವಷ್ಟು ಶ್ರೀಮಂತರಾಗುವುದು ಒಳ್ಳೆಯದೇ. ಹಾಗೆಯೇ ವ್ರತಧಾರಿಗಳಾಗಿದ್ದ ದಿನಗಳಲ್ಲಿ ದುಶ್ಚಟಗಳಿಂದ ದೂರವಿರುವುದು ಮಾತ್ರವಲ್ಲ ಮನೆಯಿಂದಲೂ ದೂರ ಇರುವ ನಿಯಮವನ್ನು ಪಾಲಿಸುವ ಮಂದಿ ವ್ರತ ಮುಗಿದ ಬಳಿಕ ಅವರು ಹಿಂದಿನಂತೆಯೇ ಕುಡಿತ, ಮನೆಯಲ್ಲಿ ಹೊಡೆತ, ಬಡಿತಗಳನ್ನೇ ಮಾಡುವವರಾದರೆ ಅವರ ವ್ರತಾಚರಣೆಗೆ, ಅವರು ನಂಬಿರುವ ದೇವರಿಗೆ ಎಲ್ಲಿ ಗೌರವ ಘನತೆ ಉಳಿದೀತು? ಇಂತಹ ಧರ್ಮಾನುಯಾಯಿಗಳಿಗೆ ಟಿವಿ ಮೊದಲ ಆದ್ಯತೆ ಆಗಿತ್ತು. ಇಂತಹುದೇ ಇನ್ನೊಂದು ಮನೆಗೂ ಟಿವಿ ಬಂದಿತ್ತು. ಈ ಮನೆಯಲ್ಲೂ ಮನೆಯ ಹೆಂಗಸು ಬೀಡಿ ಕಟ್ಟಿ ಮನೆ ನಿರ್ವಹಣೆ ನಡೆಸುತ್ತಿದ್ದರೆ ಮನೆಯ ಯಜಮಾನ ಎನ್ನುವವನು ವಾರದ ಕೊನೆಯ ದಿನ ಸಂಜೆ ತೂರಾಡುತ್ತಾ ಬಂದು ಮಲಗಿದರೆ ರವಿವಾರದ ದಿನದಲ್ಲಿ ಮನೆಯಲ್ಲಿ ಮೋಜಿನ ಊಟ ನಡೆದರೆ ಸೋಮವಾರ, ಮಂಗಳವಾರ ದುಡಿಮೆಯ ನೆನಪೇ ಇಲ್ಲದಿರುವುದು ನಡೆಯುತ್ತಿತ್ತು. ಈ ಮನೆಗೂ ಶೌಚಾಲಯದ ಅಗತ್ಯ ಕಾಣದಿದ್ದರೂ ಅದ್ಹೇಗೋ ಟಿವಿ ತರಲು ಹಣ ಹೊಂದಿಕೆಯಾಗಿತ್ತು. ಟಿವಿ ಬಂತು ಎಂಬ ಪ್ರತಿಷ್ಠೆ.

ದೇಶದ ಪ್ರಧಾನಿ ಇಂದಿರಾ ಗಾಂಧಿ 1984ರ ಅಕ್ಟೋಬರ್ 31ರಂದು ಹತ್ಯೆಯಾದ ಸುದ್ದಿ ಬಂದಾಗ ಎಲ್ಲಾ ಮನೆಯ ಹೆಂಗಸರು ಮಕ್ಕಳು ಈಗ ಈ ಎರಡೂ ಮನೆಗಳಿಗೆ ಟಿವಿ ನೋಡಲು ಹೋಗುತ್ತಿದ್ದುದು ಅವರ ಮಾತುಗಳ ಚರ್ಚೆಯಲ್ಲಿ ಸಾಮಾನ್ಯ ಜನರಾದರೂ ಚಿಂತಿಸುವ ಅಂಶಗಳು ಇದ್ದುದು ಗಮನಿಸಬೇಕಾದುದೇ ಆಗಿತ್ತು. ಒಂದು ಇಂಡಿಯಾ ಎಂದರೆ ಇಂದಿರಾ ಎಂಬ ಸಮೀಕರಣವಾದಂತೆ ತಮ್ಮ ತಾಯನ್ನೇ ಕಳಕೊಂಡಂತಹ ಅನಾಥ ಪ್ರಜ್ಞೆ ಕೆಲವರಲ್ಲಾದರೆ, ಇನ್ನು ಕೆಲವರಿಗೆ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದ ಬಗ್ಗೆ ಇನ್ನೂ ಆಕ್ರೋಶವಿದ್ದುದು ವ್ಯಕ್ತವಾಗುತ್ತಿತ್ತು.

ಮುಂದೆ ನಮ್ಮ ಮನೆಗೆ ಟಿವಿ ಬಂತು. ಆಗ ದೂರದರ್ಶನವು ಸರಕಾರದ ವಾರ್ತಾ ಇಲಾಖೆಯ ಅಧೀನದಲ್ಲಿದ್ದುದರ ಕಾರಣವೋ ಏನೋ ಇಂದಿನಂತೆ ಕಣ್ಣು ಮುಚ್ಚಬೇಕಾದ, ಕಿವಿ ಮುಚ್ಚಬೇಕಾದ ಕಾರ್ಯಕ್ರಮಗಳು ಇರುತ್ತಿರಲಿಲ್ಲ ಎನ್ನುವುದು ಸಂತಸದ ವಿಷಯ. ರವಿವಾರ ಬರುತ್ತಿದ್ದ ರಮಾನಂದ ಸಾಗರರ ರಾಮಾಯಣ ನೋಡಲು ಸುತ್ತಲಿನ ಮನೆಯ ಮಕ್ಕಳು ನಮ್ಮ ಮನೆಯಲ್ಲಿ ಸೇರುತ್ತಿದ್ದರು. ಮುಂದೆ ಮಹಾಭಾರತ, ಪಂಚತಂತ್ರದ ಕಥೆಗಳು, ಬೈಬಲ್‌ನ ಕಥೆಗಳು. ಸೂಫಿ ಸಂತರ ಕಥೆಗಳು, ಟಿಪ್ಪು ಸುಲ್ತಾನ, ಅಶೋಕ, ಝಾನ್ಸಿ ರಾಣಿ ಮೊದಲಾದ ಚಾರಿತ್ರಿಕ ವ್ಯಕ್ತಿಗಳ ಕಥೆಗಳು, ಈ ದೇಶದ ವೈವಿಧ್ಯಮಯ ಸಂಸ್ಕೃತಿಯ ಪರಿಚಯಗಳೊಂದಿಗೆ, ವಿವಿಧ ಭಾಷೆಗಳ ಸಾಹಿತ್ಯಗಳನ್ನಾಧರಿಸಿದ ಧಾರಾವಾಹಿಗಳು, ನಿಷ್ಪಕ್ಷವಾದ ಸುದ್ದಿಗಳು ಟಿವಿ ಎಂದರೆ ಒಂದು ಅದ್ಭ್ಬುತ ಮಾಯಾಜಾಲ, ಮನೋರಂಜನೆಗಳೊಂದಿಗೆ, ಉತ್ತಮ ಜೀವನ ವೌಲ್ಯಗಳ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದುದೂ ನಿಜವೇ. ಟಿವಿ ಬಂದ ಪ್ರಾರಂಭದಲ್ಲಿ ಪ್ರೊ.ಕು.ಶಿ.ಹರಿದಾಸ ಭಟ್ಟರು ತಮ್ಮ ಅಂಕಣ ‘ಲೋಕಾಭಿರಾಮ’ದಲ್ಲಿ ‘‘ಮೂರ್ಖರ ಪೆಟ್ಟಿಗೆ’’ ಎಂದು ಹೇಳಿದ್ದರೂ ನಮಗೆ ಹಾಗೆ ಅನ್ನಿಸಲಿಲ್ಲ. ಅದಕ್ಕೆ ಎರಡು ಕಾರಣ. ಒಂದು ನಾವು ಅದಕ್ಕೆ ಗುಲಾಮರಾಗದೆ ಇರುವುದು. ಇನ್ನೊಂದು ನಮ್ಮ ಆಯ್ಕೆಯ ಕಾರ್ಯಕ್ರಮಗಳನ್ನು ಮಾತ್ರ ನೋಡುವುದು.

ಆದರೆ ಇಂದು ಟಿವಿ ಚಾನೆಲ್‌ಗಳ ಸಂಖ್ಯೆ ಹೆಚ್ಚಾಗಿರುವುದಲ್ಲದೆ ಅವು ಖಾಸಗೀಕರಣಗೊಂಡಿರುವುದರಿಂದ ನಮ್ಮ ಆಯ್ಕೆಗಳಿಗೆ ಅವಕಾಶವೇ ಇಲ್ಲ ಎನ್ನುವಂತಾಗಿದೆ. ಸರಕಾರಕ್ಕೆ ಇವುಗಳ ಮೇಲೆ ನಿಯಂತ್ರಣವಿಲ್ಲದಿರುವುದರಿಂದಲೇ ಇಂದು ಟಿವಿಯ ಕಾರ್ಯಕ್ರಮಗಳಿಂದ ಸಮಾಜ ಅಸ್ವಸ್ಥಗೊಂಡಿರುವುದನ್ನು ಗಮನಿಸಿದರೆ ಇದಕ್ಕೊಂದು ನಿಯಂತ್ರಣ ಬೇಕೇ ಬೇಕು ಎಂದು ಪ್ರಜ್ಞಾವಂತರಿಗೆ ಅನ್ನಿಸಿದರೆ ತಪ್ಪಿಲ್ಲ. ಇವುಗಳಿಗೆ ನಿಯಂತ್ರಣ ಇಲ್ಲ ಎಂದಾಗ ನಮ್ಮ ಮಕ್ಕಳ ಒಳಿತಿಗಾಗಿ, ನಮ್ಮ ಮನಸ್ಸಿನ ಮೇಲಿನ ನಿಯಂತ್ರಣಕ್ಕಾಗಿ ನಾವೇ ಟಿವಿಯನ್ನು ನೋಡದಿರುವ ಸಮಯ ಬೆಳೆಸಿಕೊಳ್ಳಬೇಕಾಗಿದೆ.

 ಇಂತಹ ಟಿವಿಗಳು ಕೆಟ್ಟು ಹೋಗುತ್ತಿದ್ದುದು ನನ್ನೂರಿನ ಅಂದಿನ ಮಳೆ, ಗಾಳಿ, ಗುಡುಗು, ಸಿಡಿಲಿಗೆ. ಕಾಟಿಪಳ್ಳ ಕೃಷ್ಣಾಪುರದಲ್ಲಿ ಆ ದಿನಗಳಲ್ಲಿ ಮಳೆ ಏನೂ ವಿಶೇಷ ಅನ್ನಿಸದಿದ್ದರೂ ಗುಡುಗು ಸಿಡಿಲಿನ ಅಬ್ಬರ ಮಾತ್ರ ಹೆಚ್ಚು. ಗುಡುಗು ಎನ್ನುವ ಶಬ್ದ ಸಿಡಿಲು ಬಂದ ಬಳಿಕ ಕೇಳಿಸುವಂತಹುದು. ಸಿಡಿಲು ಅಂದರೆ ಮಿಂಚಿನ ಬೆಳಕು ಕಣ್ಣು ಕೋರೈಸಿದಾಗ ಗುಡುಗು ಕೇಳಿದಂತೆ ಕಿವಿ ಮುಚ್ಚಿಕೊಳ್ಳಬಹುದು. ಆದರೆ ಮಿಂಚೆಂಬ ಸಿಡಿಲು ಬರುವ ಮುನ್ಸೂಚನೆ ಇಲ್ಲದ್ದರಿಂದ ಬಂದ ಬಳಿಕ ಅಂದರೆ ನೋಡಿದ ಬಳಿಕ ಭಯದಿಂದ ಕಣ್ಣು ಮುಚ್ಚಿಕೊಳ್ಳಬೇಕು. ಮುಚ್ಚಿಕೊಂಡರೂ ಏನೂ ಪ್ರಯೋಜನವಿಲ್ಲ ಎಂಬುದು ಗೊತ್ತಿದ್ದರೂ ಕಣ್ಣು ತಾನಾಗಿಯೇ ಮುಚ್ಚುಕೊಳ್ಳುವುದೂ ಸತ್ಯವೇ. ಕಾಟಿಪಳ್ಳ ಎಂಬ ಊರು ಎತ್ತರದ ಪ್ರದೇಶದಲ್ಲಿದ್ದುದಕ್ಕೋ ಅಥವಾ ದಟ್ಟವಾದ ಮರ ಗಿಡಗಳು ಇಲ್ಲದಕ್ಕೋ ಗೊತ್ತಿಲ್ಲ ಇಲ್ಲಿ ಸಿಡಿಲಿನ ಸಿಡುಕು ಹೆಚ್ಚಿನದ್ದೇ. ಸಾಕಷ್ಟು ಜೀವ ಹಾನಿಗಳಾಗಿವೆ. ಮನೆಗಳು ಬಿರುಕು ಬಿಟ್ಟಿವೆ. ತೆಂಗಿನ ಮರಗಳು ಸುಟ್ಟಿವೆ. ನಾನೇ ಸ್ವತಃ ಅನೇಕ ಬಾರಿ ಮಿಂಚಿನ ಈ ರುದ್ರ ರಮಣೀಯ ಸ್ವರೂಪವನ್ನು ನೋಡಿದ್ದೇನೆ.

ಆಕಾಶದಿಂದ ಭೂಮಿಗೆ ಇಳಿಯುವ ಬೆಳಕಿನ ರೇಖೆ ಹಗಲಲ್ಲೇ ಅಷ್ಟೊಂದು ಹೊಳಪಿರಬೇಕಾದರೆ ಅದರ ವೊಲ್ಟೇಜ್ ಎಷ್ಟಿರಬಹುದು ಎಂಬುದು ಬುದ್ಧಿಯ ತರ್ಕವಾದರೆ ಎದೆಯೊಳಗೆ ಭಯದ ಬಡಿತ. ಎರಡು ಬಾರಿ ನಾನೇ ಸ್ವತಃ ಈ ಮಿಂಚಿನ ಸ್ಪರ್ಶದ ಅನುಭವವನ್ನು ಕಂಡಿದ್ದೇನೆ. ಅದರೆ ಓಟವನ್ನು ನೋಡಿ ದಂಗು ಬಡಿದಂತಾಗಿದ್ದೇನೆ. ಬಹುಶಃ ಆ ಅನುಭವಗಳ ಬಳಿಕ ಪ್ರಾಕೃತಿಕ ಸತ್ಯದ ಬಗ್ಗೆ ಭಯವನ್ನು ಎದುರಿಸುವ ಧೈರ್ಯವನ್ನೂ ಪಡೆದಿದ್ದೇನೆ. ಆಗುವುದಿದ್ದಲ್ಲಿ ತಪ್ಪಿಸಲು ಸಾಧ್ಯವಿಲ್ಲ ಎಂಬ ಹಿರಿಯರ ಅನುಭವದ ಜ್ಞಾನವೇ ಈ ಭಯ ನಿವಾರಣೆಗೆ ಸರಳ ಸೂತ್ರ.

ಅಂದು ರವಿವಾರ ಬರುತ್ತಿದ್ದ ಮಳೆ ನಿಂತಿತೆಂದು ಬೆಳಗ್ಗೆ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದೆ. ನನ್ನ ಕಣ್ಣು ಕೋರೈಸಿದಂತಾಗಿ ನನ್ನ ತಲೆಯ ಮೇಲಿಂದ ಹಾದು ಹೋದ ಮಿಂಚು ಅಂಗಳ, ರಸ್ತೆ ದಾಟಿ ಮುಂದಿನ ಒಂದು ಮನೆಯ ತೆಂಗಿನ ತುದಿಗೆ ಅಪ್ಪಳಿಸಿತು. ಅಲ್ಲಿ ಬೆಂಕಿ ಉರಿಯುತ್ತಲೇ ಮರದ ತುದಿಯ ಸೋಗೆಗಳು ಸುಟ್ಟು ಕರಕಲಾದವು. ಮುಂದೆ ಆ ಮರ ಚಿಗುರದೆ ಸತ್ತೇ ಹೋಯಿತು. ಇನ್ನೊಮ್ಮೆ ನಾನು ಮನೆಯೊಳಗೇ ಇದ್ದೆ. ಮಧ್ಯಾಹ್ನದ ಹೊತ್ತು. ಜೋರಾಗಿ ಮಳೆ ಸುರಿಯುತ್ತಿತ್ತು. ಈ ಊರಿನ ಮಳೆ ಗಾಳಿ ಸಿಡಿಲಿನ ಅನುಭವದಿಂದಾಗಿ ಅತ್ತೆ, ಮಾವ ಹಾಗೂ ಮಕ್ಕಳಿಬ್ಬರನ್ನು ಮರದ ಮಂಚದಲ್ಲಿ ಕುಳ್ಳಿರಿಸಿದೆ. ಕಾಲುಗಳನ್ನು ನೆಲಕ್ಕೆ ತಾಗಿಸದಂತೆ ಎಚ್ಚರಿಸಿದ್ದೆ. ಹಾಗೆಯೇ ಎಲ್ಲರೂ ಮಂಚದ ಮೇಲೆ ಕಾಲು ಮಡಚಿಕೊಂಡು ಕುಳಿತಿದ್ದರು. ಮಿಂಚು ಅಂದರೆ ವಿದ್ಯುತ್ ತಾನೇ. ವಿದ್ಯುತ್ ಮರದಲ್ಲಿ ಪ್ರವಹಿಸುವುದಿಲ್ಲ ಎಂದು ತಿಳಿದಿತ್ತು. ನಮ್ಮವರೂ ಮರದ ಕುರ್ಚಿಯಲ್ಲಿ ಕಾಲು ಮಡಚಿ ಕುಳಿತು ಓದುವುದೋ, ಬರೆಯುವುದನ್ನೋ ಮಾಡುತ್ತಿದ್ದರು. ನಾನು ಓಡಾಡಿ ಮಾಡುವ ಯಾವುದೋ ಕೆಲಸದಲ್ಲಿದ್ದುದರಿಂದ ಕಾಲಿಗೆ ರಬ್ಬರ್‌ನ ಚಪ್ಪಲಿ ಹಾಕಿಕೊಂಡಿದ್ದೆ. ಅಡಿಗೆ ಕೋಣೆಯಲ್ಲಿದ್ದೆ. ಇದ್ದಕ್ಕಿದ್ದ ಹಾಗೆಯೇ ನನ್ನ ಅಡುಗೆ ಕೋಣೆಯಲ್ಲಿದ್ದ ವಿದ್ಯುತ್ ಒಲೆ ಸ್ವಿಚ್ ಹಾಕಿರದಿದ್ದರೂ ಕೆಂಪಗೆ ಉರಿಯಲಾರಂಭಿಸಿತು. ತಕ್ಷಣವೇ ನನ್ನ ಕಾಲಡಿಯಲ್ಲಿ ವಿದ್ಯುತ್ ತುಳಿದ ಅನುಭವ. ಅಷ್ಟರಲ್ಲಿ ಕಿವಿಗೆ ಗುಡುಗು ಅಪ್ಪಳಿಸಿತು.

ನನ್ನ ಕಾಲಡಿಯಲ್ಲಿ ಸರಿದ ಮಿಂಚು ಅದೇ ನೆಲದಿಂದ ಮುಂದೆ ಸಾಗಿ ರಸ್ತೆಯ ಎದುರಲ್ಲಿ ತಗ್ಗಿನಲ್ಲಿದ್ದ ಮಣ್ಣಿನ ಮನೆಯ ಗೋಡೆಗೆ ಬಡಿದು ಬಹುಶಃ ನೆಲ ಸೇರಿ ತಣ್ಣಗಾಗಿರಬೇಕು. ನಮ್ಮ ಮನೆಗೆ ಬಂದ ಈ ಮಿಂಚು ನಮ್ಮ ಮನೆಗಿಂತ ಮೊದಲು ನಮ್ಮ ಮನೆಯ ಬಲ ಬದಿಯಲ್ಲಿ ಎತ್ತರದಲ್ಲಿದ್ದ ಮನೆಯ ಬಚ್ಚಲಿನಲ್ಲಿದ್ದ ತಾಮ್ರದ ಹಂಡೆಯನ್ನು ಕೆಂಪಗಾಗುವಷ್ಟು ಮತ್ತು ಹಂಡೆ ಒಂದಿಷ್ಟು ವಿಕಾರವಾಗುವಂತೆ ಮಾಡಿ ನಮ್ಮ ಮನೆಗೆ ಬಂದಿತ್ತು. ಆ ಮನೆ ಮಂದಿಗೇನೂ ಹಾನಿ ಮಾಡಿರಲಿಲ್ಲ. ನಮಗೂ ಹಾನಿ ಮಾಡಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವು ಮನೆಗಳ ಟಿವಿಗಳು ಹಾಳಾಗುವುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಟಿವಿಯ ಕನೆಕ್ಷನನ್ನು ವಿದ್ಯುತ್ ಸ್ವಿಚ್‌ನಿಂದ ಬೇರ್ಪಡಿಸಿಟ್ಟಲ್ಲಿ ತೊಂದರೆಯಾಗುತ್ತಿರಲಿಲ್ಲ. ನಾನು ಸಾಮಾನ್ಯವಾಗಿ ಹಾಗೆಯೇ ಮಾಡುತ್ತಿದ್ದೆ. ಆದ್ದರಿಂದ ಹೆಚ್ಚಿನ ಅಪಾಯವಾಗಿರಲಿಲ್ಲ. ಸಾಮಾನ್ಯವಾಗಿ ಸಿಡಿಲು ಬಡಿದಾಗ ಟಿವಿಯೊಂದಿಗೆ ಫ್ರಿಜ್, ವಾಶಿಂಗ್ ಮೆಶಿನ್‌ಗಳು ಹಾಳಾಗುವುದೂ ಇವೆ. ಆದರೆ ಆಗ ನನ್ನ್ನೂರಿನಲ್ಲಿ ಯಾರ ಮನೆಗಳಲ್ಲೂ ಫ್ರಿಜ್, ವಾಶಿಂಗ್ ಮೆಶಿನ್‌ಗಳೂ ಇನ್ನೂ ಪ್ರವೇಶಿಸಿರಲಿಲ್ಲ.

 ಹೀಗೆ ನನ್ನೂರಿನಲ್ಲಿ ಭಾರೀ ಮಳೆ, ಚಳಿಯನ್ನು ಅನುಭವಿಸಿದ ನಮಗೆ ಅಂದು ಸೆಕೆ ಎನ್ನುವುದು ಇರಲಿಲ್ಲ. ಹಂಚಿನ ಮನೆ ಎನ್ನುವುದೂ ಕಾರಣವಾಗಿರಬಹುದು. ಜೊತೆಗೆ ಅಂದು ಇಂದಿನಷ್ಟು ವಾಹನಗಳು ಇರಲಿಲ್ಲ. ಆದ್ದರಿಂದ ವಾಯು ಮಾಲಿನ್ಯವೂ ಕಡಿಮೆ ಇತ್ತು. ಆ ಅರ್ಥದಲ್ಲಿ ಅದು ನಗರವಾಗಿರಲಿಲ್ಲ. ಮಾತ್ರವಲ್ಲ ಆಡಳಿತಾತ್ಮಕವಾಗಿಯೂ ಅದು ಗ್ರಾಮ ಪಂಚಾಯತ್ ಆಗಿತ್ತು. ಮುಂದೆ ಸುರತ್ಕಲ್ ಪುರಸಭೆಯಾದಾಗ ಅದರೊಳಗೆ ಸೇರ್ಪಡೆಯಾಗಿ ಪುರಸಭೆಯ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶಗಳು ಬಂದಿತ್ತು. ಹೀಗೆ ನನ್ನೂರು ನಿಧಾನವಾಗಿ ಆಧುನಿಕತೆಗೆ ತೆವಳುತ್ತಾ ಸಾಗುತ್ತಿತ್ತು ಎಂದು ಈಗ ಭಾರೀ ಕೈಗಾರಿಕೆಗಳನ್ನೊಳಗೊಂಡು ವೇಗವಾಗಿ ನಗರದ ಎಲ್ಲಾ ಸೌಲಭ್ಯಗಳೊಂದಿಗೆ, ನಗರಕ್ಕೆ ಮೀಸಲಾದ ಕೆಲವು ಕೆಡುಕುಗಳಿಗೆ ಕೂಡಾ ಉದಾಹರಣೆಯಾಗಿದೆ ಎಂದರೆ ವಿಷಾದವಲ್ಲದೆ ಇನ್ನೇನು?

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News