ಖಾಸಗಿ ವಾಹನಗಳಲ್ಲಿ ನಾಮಫಲಕ ಬಳಕೆ ವಿರುದ್ಧ ಕಾರ್ಯಾಚರಣೆ: ಉಡುಪಿ ಎಸ್ಪಿ ಡಾ.ಸಂಜೀವ ಪಾಟೀಲ್

Update: 2017-11-30 10:21 GMT

ಉಡುಪಿ, ನ.30: ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ನಾಯಕರುಗಳು ತಮ್ಮ ಹೆಸರು ಹಾಗೂ ಹುದ್ದೆಗಳ ನಾಮಫಲಕಗಳನ್ನು ಖಾಸಗಿ ವಾಹನಗಳ ನಂಬರ್ ಪ್ಲೇಟ್ ಗಳಲ್ಲಿ ಅಳವಡಿಸುವುದರ ವಿರುದ್ಧ ಡಿಸೆಂಬರ್ ಎರಡನೆ ವಾರದಿಂದ ಕಾರ್ಯಾಚರಣೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ಫೋನ್ ಇನ್ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆ ಯಲ್ಲಿ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಅದೇ ರೀತಿ ಯಾರೂ ಕೂಡ ತಮ್ಮ ವಾಹನಗಳಲ್ಲಿ ಯಾವುದೇ ಬಣ್ಣದ ಸ್ಟಿಕ್ಟರ್‌ಗಳನ್ನು ಕೂಡ ಬಳಸುವಂತಿಲ್ಲ. ಇದರ ವಿರುದ್ಧವೂ ಕಾನೂನು ಕ್ರಮ ಜರಗಿಸಲಾಗುವುದು ಎಂದರು.

ಮಾಧ್ಯಮದವರು, ಪತ್ರಿಕಾ ವಿತರಕರು, ಜಾಹೀರಾತುದಾರರು, ಸಾಗಾಟ ಗಾರರು ಪ್ರೆಸ್ ಅಥವಾ ಮೀಡಿಯಾ ಸ್ಟಿಕ್ಕರ್‌ಗಳನ್ನು ಬಳಸಬಾರದು. ಈ ಕುರಿತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜೊತೆ ಮಾತುಕತೆ ನಡೆಸಿ ಪೊಲೀಸ್ ಇಲಾಖೆಯಿಂದ ಪತ್ರಕರ್ತರಿಗೆ ಸ್ಟಿಕ್ಕರ್ ನೀಡುವ ಕೆಲಸ ಮಾಡಲಾಗುವುದು ಎಂದು ಎಸ್ಪಿ ಹೇಳಿದರು.

ಸರಗಳ್ಳರ ಬಗ್ಗೆ ಎಚ್ಚರ
ಉಡುಪಿ ಜಿಲ್ಲೆಯ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಸರ ಅಪಹರಣ ಪ್ರಕರಣಗಳು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ ವಾಕಿಂಗ್‌ಗೆ ಹೋಗುವ ಮಹಿಳೆಯರು ಒಬ್ಬಂಟಿಯಾಗಿ ಹೋಗದೆ ಮನೆ ಯವರು ಅಥವಾ ನೆರೆಹೊರೆಯವರ ಜೊತೆ ಹೋಗಬೇಕು. ವಿಳಾಸ ಕೇಳುವ ನೆಪದಲ್ಲಿ ಬರುವ ಅಪರಿಚಿತರ ಬಗ್ಗೆ ಜಾಗೃತರಾಗಿರಬೇಕು ಎಂದು ಎಸ್ಪಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿರುವ ಹುಬ್ಬುಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಇದರ ವಿರುದ್ಧ ಕ್ರಮ ಜರಗಿಸುವಂತೆ ಸಾರ್ವ ಜನಿಕರೊಬ್ಬರು ದೂರಿದರು. ಪೊಲೀಸ್ ನಿರೀಕ್ಷಕರನ್ನು ಸ್ಥಳಕ್ಕೆ ಇಂದೇ ಕಳುಹಿಸಿ ಪರಿಶೀಲನೆ ನಡೆಸಿ ಹುಬ್ಬುಗಳು ಅವೈಜ್ಞಾನಿಕವಾಗಿದ್ದರೆ ತೆರವಿಗೆ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

ಮಣಿಪಾಲ ಪೊಲೀಸ್ ವಸತಿಗೃಹದಲ್ಲಿ ಒಳಚರಂಡಿ ಸಮಸ್ಯೆ ಕುರಿತ ಮಹಿಳೆ ಯೊಬ್ಬರ ದೂರಿಗೆ ಸ್ಪಂದಿಸಿದ ಎಸ್ಪಿ, ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನಗರಸಭೆ ಪೌರಾಯುಕ್ತರಿಗೆ ದುರಸ್ತಿ ಮಾಡುವಂತೆ ತಿಳಿಸಲಾಗಿದೆ ಎಂದರು. ಮಲ್ಪೆ ಪಡುಕೆರೆ ಸೇತುವೆಯಲ್ಲಿ ಸಾರ್ವಜನಿಕರು ಕಸ ವನ್ನು ನದಿಗೆ ಎಸೆಯುತ್ತಿದ್ದು, ಸೇತುವೆಯಲ್ಲಿ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ದೂರಿದರು.

ಹೆಲ್ಮೆಟ್ ಧರಿಸದವರಿಗೆ ನೋಟಿಸ್
ಹಿಂದೂ ಸಮಾಜೋತ್ಸವದ ಬೈಕ್ ರ್ಯಾಲಿಯಲ್ಲಿ ಸವಾರರು ಹೆಲ್ಮೆಟ್ ಧರಿಸದ ಬಗ್ಗೆ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುವಾಗ ಭದ್ರತೆಯನ್ನು ಬಿಟ್ಟು ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲು ಆಗುವುದಿಲ್ಲ. ಬೈಕ್ ರ್ಯಾಲಿ ಸಂದರ್ಭದಲ್ಲಿ ಮಾಡಿರುವ ವೀಡೀಯೊ ಚಿತ್ರೀಕರಣವನ್ನು ಪರಿ ಶೀಲಿಸಿ ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಗುರುತಿಸಿ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಲಘು ವಾಹನಗಳಿಗೆ ಸುರತ್ಕಲ್ ಟೋಲ್ ಗೇಟ್‌ನಲ್ಲಿ 40 ರೂ., ಹೆಜಮಾಡಿ ಗೇಟ್‌ನಲ್ಲಿ 50 ರೂ. ಮತ್ತು ಸಾಸ್ತಾನ ಗೇಟ್‌ನಲ್ಲಿ 60 ರೂ. ಪಡೆದು ಕೊಳ್ಳಲಾಗುತ್ತದೆ. ಈ ರೀತಿ ಬೇರೆ ಬೇರೆ ದರಗಳನ್ನು ಪಡೆಯುವುದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಾಹನ ಚಾಲಕರೊಬ್ಬರು ದೂರಿದರು.

ಸಂಸ್ಕೃತ ಕಾಲೇಜು ಸಮೀಪದ ಸಿಸಿಟಿವಿ ಕ್ಯಾಮೆರಾ ಹಾಳಾಗಿರುವ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಕುರಿತು ಪರಿಶೀಲನೆ ನಡೆಸಲಾಗುವುದು. ನಗರ ಪ್ರದೇಶ ಹೊರತು ಪಡಿಸಿ ಜಿಲ್ಲೆಯ 294 ಸ್ಥಳಗಳಲ್ಲಿ 667 ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಈಗಾಗಲೇ ಜಿಲ್ಲಾ ಪಂಚಾಯತ್‌ಗೆ ಪೊಲೀಸ್ ಇಲಾಖೆಯಿಂದ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಕ್ರಮ ತೆಗೆದುಕೊಂಡರೆ ಸನ್ಮಾನ!
 ಮಣಿಪಾಲದ ವ್ಯಕ್ತಿಯೊಬ್ಬರು ಕರೆ ಮಾಡಿ ಮಣಿಪಾಲದ ಅಂಚೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ರಸ್ತೆಗಳಲ್ಲಿ ಗೂಡ್ಸ್ ವಾಹನಗಳು, ಬಸ್‌ಗಳು ಕರ್ಕಶ ಹಾರ್ನ್‌ಗಳನ್ನು ಬಳಲುತ್ತಿದ್ದು, ಇದರ ವಿರುದ್ಧ ಕ್ರಮ ತೆಗೆದುಕೊಂಡರೂ ಮತ್ತೆ ಮತ್ತೆ ಹಾರ್ನ್‌ಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತದೆ. ಇಂತಹ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಂಡರೆ ನಿಮ್ಮನ್ನು (ಎಸ್ಪಿ) ಸನ್ಮಾನಿಲಾಗುವುದು ಎಂದರು.

ನವಜಾತ ಶಿಶು ಅದಲು ಬದಲು!
ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವನ್ನು ಅದಲು ಬದಲು ಮಾಡಿರುವ ಬಗ್ಗೆ ಬ್ರಹ್ಮಾವರದ ಸಾರ್ವಜನಿಕರೊಬ್ಬರು ಎಸ್ಪಿಗೆ ಕರೆ ಮಾಡಿ ದೂರಿದ್ದಾರೆ.
ಈ ಕೃತ್ಯವನ್ನು ಆಸ್ಪತ್ರೆಯವರು ಉದ್ದೇಶ ಪೂರ್ವಕವಾಗಿ ಮಾಡಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಈ ಬಗ್ಗೆ ಕಚೇರಿ ಬಂದು ಮಾಹಿತಿ ನೀಡುವಂತೆ ಎಸ್ಪಿ ದೂರುದಾರರಿಗೆ ಸೂಚಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News