ರೈಲುಗಳಲ್ಲಿ ಜಿಪಿಎಸ್ ವ್ಯವಸ್ಥೆಗೆ ಸಚಿವ ಪಿಯೂಷ್ ಗೋಯಲ್ ಸೂಚನೆ
ಹೊಸದಿಲ್ಲಿ, ನ.30: ರೈಲುಗಳ ಕುರಿತು ಸರಿಯಾದ ವಿವರಗಳನ್ನು ಪ್ರಯಾಣಿಕರಿಗೆ ನೀಡುವುದಕ್ಕಾಗಿ ಜಿಪಿಎಸ್ ವ್ಯವಸ್ಥೆಯನ್ನು ಸ್ಥಾಪಿಸುವಂತೆ ರೈಲ್ವೆ ಸಚಿವಾಲಯ ಸೂಚಿಸಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ 16 ವಲಯಗಳಿಗೆ ಈ ಸಂಬಂಧ ಸೂಚನೆಯನ್ನು ಹೊರಡಿಸಿದ್ದಾರೆ.
ರೈಲ್ವೆಯ ಸಮಯ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ 'ಆರ್‍ಪಿಎಂಎ' ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಆರಂಭದಲ್ಲಿ ಇದು ಹೌರಾ, ದಿಲ್ಲಿ, ಮುಂಬೈ ಮಾರ್ಗದಲ್ಲಿ ಫೆಬ್ರವರಿಯಲ್ಲಿ ಜಾರಿಗೆ ಬರಲಿದೆ. ನಂತರ ಹಂತಹಂತವಾಗಿ ದೇಶದ ಇತರ ರೈಲ್ವೆ ವಲಯಗಳಲ್ಲಿಯೂ ಜಾರಿಗೆ ಬರಲಿದೆ. ಕಳೆದ ಅಕ್ಟೋಬರ್‍ನಲ್ಲಿ ಹೊಸ ಜಿಪಿಎಸ್ ವ್ಯವಸ್ಥೆಯನ್ನು ಮುಗಲಸರೈ ವಿಭಾಗದಲ್ಲಿ ಪರೀಕ್ಷಾರ್ಥ ಜಾರಿಗೊಳಿಸಿದ್ದು ಯಶಸ್ವಿಯಾಗಿತ್ತು.
ರೈಲಿನ ಸಮಯ, ಸ್ಥಳ ಕಂಡು ಹಿಡಿಯಲು ಈಗ ನ್ಯಾಶನಲ್ ಟ್ರೈನ್ ಎನ್‍ಕ್ವರಿ ಸಿಸ್ಟಂ(ಎನ್‍ಟಿಇಎಸ್) ಅನ್ನು ಈಗ ರೈಲ್ವೆ ಉಪಯೋಗಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸಮಯ ಮತ್ತು ಸ್ಥಳವನ್ನು ದಾಖಲಿಸುತ್ತಾರೆ. ರೈಲುಗಳು ಒಂದೊಂದೇ ನಿಲ್ದಾಣವನ್ನು ದಾಟುವಾಗ ಆಯಾ ನಿಲ್ದಾಣದ ಮಾಸ್ಟರ್‍ಗಳು ಸಮಯವನ್ನು ಎನ್‍ಟಿಇಎಸ್‍ಗೆ ಕೇಂದ್ರಕ್ಕೆ ನೀಡುತ್ತಾರೆ. ಹೊಸ ವ್ಯವಸ್ಥೆಯಿಂದ ಸಮಯ ಉಳಿತಾಯವಾಗಲಿದೆ ಎನ್ನಲಾಗಿದೆ.