ಡಿ.1ರಿಂದ ಭುವನೇಶ್ವರದಲ್ಲಿ ವಿಶ್ವ ಹಾಕಿ ಲೀಗ್ ಫೈನಲ್

Update: 2017-11-30 18:11 GMT

ಭುವನೇಶ್ವರ, ನ.30: ವಿಶ್ವ ಹಾಕಿ ಲೀಗ್ ಫೈನಲ್‌ನ ಅಂತಿಮ ಆವೃತ್ತಿಯ ಪಂದ್ಯಗಳು ಡಿ.1ರಿಂದ ಭುವನೇಶ್ವರದಲ್ಲಿ ನಡೆಯಲಿವೆ.

 2012ರಲ್ಲಿ ಲಂಡನ್ ಒಲಿಂಪಿಕ್ಸ್ ಬಳಿಕ ಅಸ್ತಿತ್ವಕ್ಕೆ ಬಂದಿರುವ ವಿಶ್ವ ಹಾಕಿ ಲೀಗ್, ಒಲಿಂಪಿಕ್ಸ್ ಗೇಮ್ಸ್ ಹಾಗೂ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಪುರುಷ ಮತ್ತು ಮಹಿಳಾ ಹಾಕಿ ತಂಡಕ್ಕೆ ಅರ್ಹತಾ ಟೂರ್ನಿಯಾಗಿದೆ.

 ಡಿ.1ರಿಂದ 10ರ ತನಕ ಹಾಕಿ ವರ್ಲ್ಡ್ ಲೀಗ್‌ನ ಫೈನಲ್ ಪಂದ್ಯಗಳು ನಡೆಯಲಿದೆ.

 ಭುವನೇಶ್ವರ ಇತ್ತೀಚಿನ ವರ್ಷಗಳಲ್ಲಿ ಹಾಕಿ ಟೂರ್ನಮೆಂಟ್‌ಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇದು ಎರಡನೇ ಟೂರ್ನಮೆಂಟ್ ಆಗಿದೆ. 2018ರಲ್ಲಿ ಎಫ್‌ಐಎಚ್ ವಿಶ್ವಕಪ್‌ನ್ನು ಭುವನೇಶ್ವರದಲ್ಲಿ ಆಯೋಜಿಸಲಿದೆ.

  ಹಾಕಿಯಲ್ಲಿ ಹಿಂದುಳಿದ ದೇಶಗಳಲ್ಲಿ ಉತ್ತೇಜಿಸಲು ಹಾಕಿ ವರ್ಲ್ಡ್ ಲೀಗ್‌ನ್ನು ಹುಟ್ಟು ಹಾಕಲಾಗಿದ್ದು, ಎಫ್‌ಐಎಚ್‌ಯಲ್ಲಿ ಸದಸ್ಯತ್ವ ಪಡೆದಿರುವ ಎಲ್ಲ ದೇಶಗಳಿಗೂ ಈ ಟೂರ್ನಮೆಂಟ್ ಮುಕ್ತವಾಗಿದೆ. ಪ್ರಥಮ ಮತ್ತು ದ್ವಿತೀಯ ಸುತ್ತಿನ ಪಂದ್ಯಗಳು, ಸೆಮಿಫೈನಲ್‌ಗಳ ಬಳಿಕ ಫೈನಲ್ ಪಂದ್ಯಗಳು ನಡೆಯುತ್ತಿದೆ.

  ಭಾರತ ವರ್ಲ್ಡ್ ಹಾಕಿ ಲೀಗ್ ಅಸ್ತಿತ್ವಕ್ಕೆ ಬಂದ ಬಳಿಕ ಮೂರನೇ ಬಾರಿ ಹಾಕಿ ವರ್ಲ್ಡ್ ಲೀಗ್ ಫೈನಲ್‌ನ್ನು ಆಯೋಜಿಸಿದೆ. ಮುಂದಿನ ವರ್ಷ ನಡೆಯಲಿರುವ ವರ್ಲ್ಡ್ ಲೀಗ್ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ಒಲಿಂಪಿಕ್ಸ್ ಮತ್ತು ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಅರ್ಹತಾ ಪಂದ್ಯಗಳಾಗಿದೆ.

ವರ್ಲ್ಡ್ ಲೀಗ್ ಫೈನಲ್ ನಡೆಯಲಿರುವ ಕಳಿಂಗಾ ಸ್ಟೇಡಿಯಂನಲ್ಲಿ ಎಲ್ಲಾ ಕ್ರೀಡೆಗಳನ್ನು ಆಯೋಜಿಸಲು ಅವಕಾಶ ಇದೆ. ಹಾಕಿ, ಅಥ್ಲೆಟಿಕ್ಸ್, ಫುಟ್ಬಾಲ್, ಟೆನಿಸ್, ಸ್ವಿಮ್ಮಿಂಗ್, ಬಾಸ್ಕೆಟ್‌ಬಾಲ್ ಮತ್ತಿತರ ಕ್ರೀಡೆಗಳನ್ನು ಆಯೋಜಿಸಲು ಕಳಿಂಗಾ ಸ್ಟೇಡಿಯಂನಲ್ಲಿ ಅವಕಾಶ ಇದೆ. ಕಳಿಂಗಾ ಸ್ಟೇಡಿಯಂ ಹಾಕಿ ಇಂಡಿಯಾ ಲೀಗ್ ಚಾಂಪಿಯನ್ ಕಳಿಂಗ ಲ್ಯಾನ್ಸರ್ಸ್‌ನ ತವರಿನ ಕ್ರೀಡಾಂಗಣವಾಗಿದೆ. 2014ರಲ್ಲಿ ಪುರುಷರ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ್ನು ಆಯೋಜಿಸಲಾಗಿತ್ತು. ಈ ಸ್ಟೇಡಿಯಂನಲ್ಲಿ 5,000 ಮಂದಿಗೆ ಪಂದ್ಯವನ್ನು ವೀಕ್ಷಿಸಲು ಆಸನದ ವ್ಯವಸ್ಥೆ ಇದೆ.

  ಹಾಕಿ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಜಯ ಗಳಿಸಿದ ತಂಡ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ನೇರ ಪ್ರವೇಶ ಪಡೆಯಲಿದೆ. ಈ ಪೈಕಿ ಅರ್ಜೆಂಟೀನ, ಆತಿಥೇಯ ಹಾಲೆಂಡ್, ಆಸ್ಟ್ರೇಲಿಯ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ.

  ಒಟ್ಟು 8 ತಂಡಗಳು ಹಾಕಿ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಭಾಗವಹಿಸಲಿದ್ದು, ಈ ಎಲ್ಲ ತಂಡಗಳು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಈ ಟೂರ್ನಮೆಂಟ್ ತಂಡಗಳಿಗೆ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಉತ್ತಮ ಅವಕಾಶ ಒದಗಿಸಿಕೊಡಲಿದೆ. ಭಾರತದ ಪಾಲಿಗೆ ಮುಂದಿನ ವರ್ಷ ನಡೆಯಲಿರುವ ವಿವಿಧ ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗಳಿಗೆ ತನ್ನ ಶಕ್ತಿಯನ್ನು ಪರೀಕ್ಷಿಸಲು ಉತ್ತಮ ವೇದಿಕೆಯಾಗಿಲಿದೆ. ಭಾರತ ಹಾಕಿಯಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದ್ದು, ಭಾರತದ ಪುರುಷರ ಹಾಕಿ ತಂಡ ಕಳೆದ ಅಕ್ಟೋಬರ್‌ನಲ್ಲಿ ಪುರುಷರ ಹಾಕಿ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿತ್ತು.

 ಹಾಕಿ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ‘ಎ’ ಮತ್ತು ‘ಬಿ’ ಗುಂಪುಗಳಲ್ಲಿ ತಲಾ 4 ತಂಡಗಳು ಹಣಾಹಣಿ ನಡೆಸಲಿವೆ.

►ತಂಡಗಳು

ಎ’ ಗುಂಪು: ಅರ್ಜೆಂಟೀನ, ಬೆಲ್ಜಿಯಂ, ಹಾಲೆಂಡ್ ಮತ್ತು ಸ್ಪೇನ್.

ಬಿ’ ಗುಂಪು: ಆಸ್ಟ್ರೇಲಿಯ, ಜರ್ಮನಿ, ಭಾರತ ಮತ್ತು ಇಂಗ್ಲೆಂಡ್.

►ಹಿಂದಿನ ಚಾಂಪಿಯನ್ ಗಳು

2012-13: ಹಾಲೆಂಡ್-ಚಾಂಪಿಯನ್(ಚಿನ್ನ), ನ್ಯೂಝಿಲೆಂಡ್-ಬೆಳ್ಳಿ ಮತ್ತು ಸ್ಪೇನ್ -ಕಂಚು.

2014-15: ಅರ್ಜೆಂಟೀನ -ಚಾಂಪಿಯನ್(ಚಿನ್ನ), ಬೆಲ್ಜಿಯಂ-ಬೆಳ್ಳಿ, ಭಾರತ -ಕಂಚು.

ಪಂದ್ಯಗಳು

ಬಿ’ಗುಂಪು

ಜರ್ಮನಿ-ಇಂಗ್ಲೆಂಡ್

ಪಂದ್ಯದ ಸಮಯ: ಸಂಜೆ 4:45 ಗಂಟೆಗೆ

►ಆಸ್ಟ್ರೇಲಿಯ-ಭಾರತ

ಪಂದ್ಯದ ಸಮಯ: ರಾತ್ರಿ 7:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News