ಜನಾಕರ್ಷಣೆಯ ಪುಸ್ತಕ ಮಳಿಗೆಗಳಲ್ಲಿ ಖರೀದಿಯೇ ಇಲ್ಲ: ಪ್ರಕಾಶಕರ ಅಳಲು

Update: 2017-12-01 16:13 GMT

ಮಂಗಳೂರು, ಡಿ. 1: ಮೂಡುಬಿದ್ರೆಯಲ್ಲಿ ಶುಕ್ರವಾರದಿಂದ ರವಿವಾರದವರೆಗೆ ನಡೆಯುತ್ತಿರುವ ‘ಆಳ್ವಾಸ್ ನುಡಿಸಿರಿ 2017’ ಸಮ್ಮೇಳನದಲ್ಲಿ ವಿವಿಧ ಪುಸ್ತಕ ಮಳಿಗೆಗಳು ಜನಾಕರ್ಷಣೆಯಾಗಿದ್ದವು. ಆದರೆ, ಪುಸ್ತಕ ಮಳಿಗೆಗಳಿಗೆ ಜನರು ಭೇಟಿ ನೀಡುತ್ತಿದ್ದರೂ ಪುಸ್ತಕಗಳ ಖರೀದಿಗೆ ಹೆಚ್ಚಿನವರು ಮುಂದೆ ಬರುತ್ತಿಲ್ಲ ಎಂದು ಕೆಲವು ಪ್ರಕಾಶನಗಳ ಮಾಲಕರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಯು ‘ನುಡಿಸಿರಿ 2017’ನ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ ಅವರ ಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕಿದ್ದವು. ಅವರು ಬರೆದಿರುವ 34 ಕೃತಿಗಳಲ್ಲಿ 26 ಕೃತಿಗಳು ಈ ಮಳಿಗೆಯಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿದೆ. ಪುಸ್ತಕಗಳು ಶೇ. 25 ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ಮಳಿಗೆಯನ್ನು ನೋಡಿಕೊಳ್ಳುತ್ತಿರುವ ಸಾಗರ್ ಎಂಬವರು ತಿಳಿಸಿದ್ದಾರೆ.

ಸಾಗರ್‌ರವರ ಪ್ರಕಾರ ಕಳೆದ ಮೂರ್ನಾಲ್ಕು ವರ್ಷಗಳಿಂದ ನಾವು ನುಡಿಸಿರಿ ಸಮ್ಮೇಳನಗಳಲ್ಲಿ ಪುಸ್ತಕ ಮಳಿಗೆಯನ್ನು ಏರ್ಪಡಿಸುತ್ತಿದ್ದೇವೆ. ಮೊದಲ ಎರಡೂ-ಮೂರು ವರ್ಷಗಳಲ್ಲಿ ಪುಸ್ತಕಗಳ ಖರೀದಿ ಚೆನ್ನಾಗಿತ್ತು. ಶುಕ್ರವಾರ ಸಮ್ಮೇಳನದ ಮೊದಲ ದಿನವಾಗಿರುವುದರಿಂದ ಮಧ್ಯಾಹ್ನದ ವರೆಗೆ ನಿರೀಕ್ಷೆಯಂತೆ ಪುಸ್ತಕಗಳು ಬಿಕರಿಯಾಗಿಲ್ಲ ಎಂದರು.

ಸಂಕ್ರಮಣ ಪ್ರಕಾಶನದಿಂದ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಅವರ ಕೃತಿಗಳ ಸಹಿತ ವಿವಿಧ ಪುಸ್ತಕಗಳು ಮಾರಾಟಕ್ಕಿದ್ದವು. ಹಾಗೆಯೇ ಶ್ರೀನಿಧಿ ಪ್ರಕಟನೆಯ ವಿವಿಧ ಲೇಖಕರ ಸುಮಾರು 2,000 ಪುಸ್ತಕಗಳು, ಮಂಗಳೂರಿನ ಪುಸ್ತಕ ಕೇಂದ್ರದ ವತಿಯಿಂದ ಸುಮಾರು 4,000 ಪುಸ್ತಕಗಳು ಮಳಿಗೆಯಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಕೇಂದ್ರದ ಮಾಲಕ ಪ್ರಕಾಶ್ ಶಕ್ತಿನಗರ ಹೇಳುತ್ತಾರೆ.

‘‘ಪುಸ್ತಕ ಕೇಂದ್ರದಿಂದ ನೀತಿ ಕಥೆಗಳು, ವ್ಯಾಕರಣ ಪುಸ್ತಗಳು, ಧಾರ್ಮಿಕ ಪುಸ್ತಗಳ ಸಹಿತ ತುಳುನಾಡ ಆಚರಣೆಯ ಹಲವು ಪುಸ್ತಗಳು ಮಳಿಗೆಯಲ್ಲಿ ಮಾರಕ್ಕಿಡಲಾಗಿದೆ. ಈ ಪೈಕಿ ತುಳುನಾಡು ಆಚರಣೆಗಳ ಪುಸ್ತಗಳಿಗೆ ಹೆಚ್ಚಿನ ಬೇಡಿಕೆಗಳಿವೆ’’ ಎನ್ನುತ್ತಾರೆ ಪ್ರಕಾಶ್.

ಓದುವವರ ಸಂಖ್ಯೆ ಕಡಿಮೆಯಾಗಿದೆ

ಪುಸ್ತಕಗಳನ್ನು ಖರೀಗಿಸಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಕಳೆದ 18 ವರ್ಷಗಳಿಂದ ನಾನು ವಿವಿಧೆಡೆಗಳಲ್ಲಿ ಪುಸ್ತಕ ಮಳಿಗೆಗಳನ್ನು ಹಾಕಿ ಸಾವಿರಾರು ಪುಸ್ತಕಗಳನ್ನು ಮಾರಾಟಕ್ಕಿಡುತ್ತೇನೆ. ಆದರೆ, ಇತ್ತೀಚೆಗೆ ಒಂದೆರಡು ವರ್ಷಗಳಲ್ಲಿ ಪುಸ್ತಕಗಳು ನಿರೀಕ್ಷೆಯಂತೆ ಬಿಕರಿಯಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ನುಡಿಸಿರಿ ಸಮ್ಮೇಳನಗಳಲ್ಲಿ ಪುಸ್ತಕ ಮಳಿಗೆಗಳನ್ನು ನಡೆಸುತ್ತಿದ್ದೇನೆ. ಪುಸ್ತಕಗಳು ಚೆನ್ನಾಗಿ ಬಿಕರಿಯಾಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.

ಮೊಬೈಲ್ ಇಂಟರ್‌ನೆಟ್ ಕಾರಣ

ಚ್ಚಿನ ಪುಸ್ತಗಳು ಬಿಕರಿಯಾಗದಿರಲು ಮೊಬೈಲ್ ಇಂಟರ್‌ನೆಟ್ ಕಾರಣ. ಪುಸ್ತಕಗಳನ್ನು ಖರೀದಿಸಲು ಬರುವ ಗ್ರಾಹಕರಿಗೆ ನಾವು ಪುಸ್ತಕಗಳಲ್ಲಿರುವ ಮಾಹಿತಿಯ ಬಗ್ಗೆ ವಿವರಿಸುವಾಗ ಅವರು ಇವೆಲ್ಲಾ ನಮಗೆ ಇಂಟರ್‌ನೆಟ್‌ನಲ್ಲಿ ಸಿಗುತ್ತಿವೆ. ಬೇಕಾದ ಮಾಹಿತಿಗಳನ್ನು ಮೊಬೈಲ್ ಇಂಟರ್‌ನೆಟ್ ಮೂಲಕ ಪಡೆದುಕೊಳ್ಳುತ್ತೇವೆ ಎಂದು ಗ್ರಾಹಕರು ಹೇಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಅಂಕನಾಥೇಶ್ವರ ಪುಸ್ತಕ ಪ್ರಕಾಶನದಿಂದ ಶಾಲಾ ಪಠ್ಯಗಳ ಸಹಿತ ವಿವಿಧ ಪುಸ್ತಗಳ ಮಾರಾಟಕ್ಕಿಡಲಾಗಿದೆ. ಎಲ್‌ಕೆಜಿಯಿಂದ ಪದವಿ ಕಾಲೇಜುವರೆಗಿನ ಪುಸ್ತಗಳು ಸಹಿತ ವಿವಿಧ ಸುಮಾರು 3,000 ಪುಸ್ತಕಗಳ ಮಳಿಗೆಯಲ್ಲಿಡಲಾಗಿದೆ. ಆದರೆ, ಪುಸ್ತಕಗಳನ್ನು ಖರೀದಿಸಲು ಗ್ರಾಹಕರಲ್ಲಿ ಆಸಕ್ತಿ ಕಂಡುಬರುತ್ತಿಲ್ಲ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಪುಸ್ತಕಗಳ ಮಾರಾಟ ತುಂಬಾ ಕಡಿಮೆಯಾಗಿದೆ. ಕಂಪ್ಯೂಟರ್ ಮತ್ತು ಮೊಬೈಲ್‌ಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡುವುದು ಮತ್ತು ಅದರಿಂದ ಮಾಹಿತಿಗಳನ್ನು ಪಡೆಯುವುದು ಇದಕ್ಕೆ ಕಾರಣ ಎನ್ನುತ್ತಾರೆ ಅಂಕನಾಥೇಶ್ವರ ಪುಸ್ತಕ ಮಳಿಗೆಯ ಕುಮಾರ್.

ತುಳು ಸಾಹಿತ್ಯ ಅಕಾಡಮಿಯ ಪುಸ್ತಕಗಳು

ಅರುಣೋದಯ ಪಬ್ಲಿಕೇಶನ್ ಅವರ ಮಳಿಗೆಯಲ್ಲಿ ಸುಮಾರು 300 ತುಳು ಅಕಾಡಮಿ ಪ್ರಕಾಶಿತ ಪುಸ್ತಕಗಳ ಸಹಿತ ಸುಮಾರು 4,000 ವಿವಿಧ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿವೆ. ಇಲ್ಲಿ ಮಾರಲ್ಪಡುವ ನುಡಿಕಟ್ಟು ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಪುಸ್ತಕಗಳ ಮಾರಾಟ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕ ಸ್ಟಾಲುಗಳ ಸಂಖ್ಯೆಗಳು ಹೆಚ್ಚಾಗಿರುವುದರಿಂದ ಪುಸ್ತಕಗಳ ಮಾರಾಟಗಳು ಹಂಚಿ ಹೋಗುತ್ತಿವೆ. ಇದರಿಂದಾಗಿ ಒಂದೇ ಬುಕ್ ಸ್ಟಾಲ್‌ಗಳಲ್ಲಿ ಹಿಂದಿನಂತೆ ಹೆಚ್ಚಿನ ಪುಸ್ತಕಗಳು ಬಿಕರಿಯಾಗುತ್ತಿಲ್ಲ ಎನ್ನುತ್ತಾರೆ ಸ್ಟಾಲ್‌ನ ಮಾಲಕ ದೀಪಕ್.

ತುಳು ಅಕಾಡಮಿಯ ಪುಸ್ತಕಗಳನ್ನು ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನಾನೇ ಪೂರೈಸುತ್ತಿದ್ದೇನೆ. ಈ ಜಿಲ್ಲೆಗಳ ಹೆಚ್ಚಿನ ಸ್ಟಾಲುಗಳು ನನ್ನನ್ನೇ ಸಂಪರ್ಕಿಸಿ ತುಳು ಪುಸ್ತಕಗಳನ್ನು ಖರೀದಿಸುತ್ತಿವೆ ಎಂದು ದೀಪಕ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News