ಶಶಿಕಲಾ ಬಣ ನಾಮಪತ್ರ ಸಲ್ಲಿಸಲು ಟೋಪಿ ಚಿಹ್ನೆಯನ್ನು ಬಳಸಬಹುದೇ?: ಚುನಾವಣಾ ಆಯೋಗಕ್ಕೆ ದಿಲ್ಲಿ ಹೈಕೋರ್ಟ್ ಪ್ರಶ್ನೆ

Update: 2017-12-01 16:18 GMT

ಹೊಸದಿಲ್ಲಿ, ಡಿ.1: ಎಐಎಡಿಎಂಕೆಯ ಬಣಗಳಲ್ಲಿ ಒಂದಾಗಿರುವ ಶಶಿಕಲಾ ಮತ್ತು ಟಿಟಿವಿ ದಿನಕರನ್ ಬಣವು ಆರ್‌ಕೆ ನಗರ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಟೋಪಿಯ ಚಿಹ್ನೆಯನ್ನು ಬಳಸಬಹುದೇ ಎಂದು ದಿಲ್ಲಿ ಉಚ್ಛ ನ್ಯಾಯಾಲಯ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.

ಈ ಕುರಿತು ಸೂಚನೆಗಳನ್ನು ಪಡೆದು ತನಗೆ ಮಾಹಿತಿ ನೀಡುವಂತೆ ಚುನಾವಣಾ ಸಮಿತಿಯ ವಕೀಲರಿಗೆ ನ್ಯಾಯಾಧೀಶರಾದ ಎಸ್‌ಪಿ ಗರ್ಗ್ ಆದೇಶಿಸಿದ್ದಾರೆ.

ಎಐಎಡಿಎಂಕೆಯ ಅಧಿಕೃತ ಚಿಹ್ನೆಯಾದ ಎರಡು ಎಲೆಗಳ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದ ನಂತರ ಕಳೆದ ಮಾರ್ಚ್‌ನಲ್ಲಿ ಶಶಿಕಲಾ-ಟಿಟಿವಿ ದಿನಕರನ್ ಬಣಕ್ಕೆ ಚುನಾವಣಾ ಆಯೋಗ ಟೋಪಿ ಚಿಹ್ನೆಯನ್ನು ನೀಡಿತ್ತು. ಎಐಎಡಿಎಂಕೆಯ ಇನ್ನೊಂದು ಗುಂಪಾದ ಇಕೆ ಪಳನಿಸ್ವಾಮಿ ಮತ್ತು ಒ ಪನ್ನೀರ್‌ಸೆಲ್ವಂ ಬಣ ಕೂಡಾ ಎರಡೆಲೆ ಚಿಹ್ನೆಗಾಗಿ ಅರ್ಜಿ ಹಾಕಿತ್ತು. ಆದರೆ ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣಕ್ಕೆ ವಿದ್ಯುತ್ ಕಂಬ ಚಿಹ್ನೆಯನ್ನು ನೀಡಲಾಗಿತ್ತು.

ಆದರೆ ನವೆಂಬರ್ 23ರಂದು ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣದ ಪರವಾಗಿ ತೀರ್ಪು ನೀಡಿದ ಚುನಾವಣಾ ಸಮಿತಿ ಎರಡೆಲೆ ಚಿಹ್ನೆಯನ್ನು ಆ ಬಣಕ್ಕೆ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿದ ಶಶಿಕಲಾ-ದಿನಕರನ್ ಬಣ ನಾಮಪತ್ರ ಸಲ್ಲಿಸಲು ಟೋಪಿ ಚಿಹ್ನೆಯನ್ನು ಬಳಸಲು ಅನುಮತಿ ನೀಡುವಂತೆ ಮಧ್ಯಂತರ ನಿರ್ದೇಶನ ನೀಡುವಂತೆ ಕೋರಿತ್ತು.

ಶುಕ್ರವಾರ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣ, ಕೇವಲ ರಿಟರ್ನಿಂಗ್ ಆಫೀಸರ್ ಮಾತ್ರ ಶಶಿಕಲಾ ಬಣ ಟೋಪಿ ಚಿಹ್ನೆಯನ್ನು ಬಳಸಬಹುದೇ ಎಂಬುದನ್ನು ನಿರ್ಧರಿಸಲು ಸಾಧ್ಯ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News