ಐಎನ್‌ಎಸ್ ಚಕ್ರಾಕ್ಕೆ ಆಗಿರುವ ಹಾನಿಯ ಕುರಿತು ತನಿಖೆ ಆರಂಭ: ನೌಕಾಪಡೆ

Update: 2017-12-01 17:23 GMT

ಹೊಸದಿಲ್ಲಿ,ಡಿ.1: ಕಾರ್ಯಾಚರಣೆಯಲ್ಲಿರುವ ಭಾರತದ ಏಕೈಕ ಪರಮಾಣು ಚಾಲಿತ ಜಲಾಂತರ್ಗಾಮಿಯಾಗಿರುವ ಐಎನ್‌ಎಸ್ ಚಕ್ರಾ ಹಾನಿಗೀಡಾಗಿದ್ದು, ಈ ಕುರಿತು ತನಿಖೆಯನ್ನು ಆರಂಭಿಸಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಸುನಿಲ್ ಲಾಂಬಾ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ನೌಕಾದಿನದ ಪ್ರಯುಕ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎನ್‌ಎಸ್ ಚಕ್ರಾ ಸೋನಾರ್‌ಗೆ ಹಾನಿಯಾಗಿದೆ. ಅದರ ಎರಡು ಪ್ಯಾನೆಲ್‌ಗಳು ಕಳಚಿಕೊಂಡಿವೆ ಎಂದು ತಿಳಿಸಿದರು.

ಐಎನ್‌ಎಸ್ ಚಕ್ರಾ ರಷ್ಯಾ ನಿರ್ಮಿತವಾಗಿದೆ. ಭಾರತವು ಅದನ್ನು 2012ರಲ್ಲಿ ಅಂದಾಜು 700 ಮಿ.ಡಾ.ಗಳಿಗೆ ಹತ್ತು ವರ್ಷಗಳ ಅವಧಿಗೆ ರಷ್ಯಾದಿಂದ ಲೀಸ್ ಆಧಾರದಲ್ಲಿ ಪಡೆದುಕೊಂಡಿದ್ದು, ಇನ್ನೊಂದು ಜಲಾಂತರ್ಗಾಮಿಯನ್ನು ಲೀಸ್‌ಗೆ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಇತ್ತೀಚಿನ ಕೆಲವು ಸಮಯದಿಂದ ಯಾವುದೇ ಯಾನವನ್ನು ನಡೆಸಿರದ ಐಎನ್‌ಎಸ್ ಚಕ್ರಾಕ್ಕೆ ಹಾನಿ ಹೇಗೆ ಸಂಭವಿಸಿತ್ತು ಎನ್ನುವುದನ್ನು ನೌಕಾಪಡೆಯು ಬಹಿರಂಗಗೊಳಿಸಿಲ್ಲ. ಅಕುಲಾ ವರ್ಗಕ್ಕೆ ಸೇರಿದ ಈ ಜಲಾಂತರ್ಗಾಮಿಯು ಸದ್ಯ ವಿಶಾಖಪಟ್ಟಣ ಸಾಗರ ತಡಿಯಲ್ಲಿದೆ.

30 ನಾಟ್‌ಗೂ ಅಧಿಕ ವೇಗದಲ್ಲಿ ಚಲಿಸುವ ಐಎನ್‌ಎಸ್ ಚಕ್ರಾ ಸಮುದ್ರದಲ್ಲಿ 600 ಮೀಟರ್ ಆಳದವರೆಗೂ ಇಳಿಯುವ ಸಾಮರ್ಥ್ಯವನ್ನು ಹೊಂದಿದ್ದು, 80 ಸಿಬ್ಬಂದಿಗಳು ಅದನ್ನು ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News