×
Ad

ಡಿ.2ರಿಂದ 3ನೇ ಟೆಸ್ಟ್: ಸರಣಿ ಗೆಲ್ಲುವತ್ತ ಭಾರತ ಚಿತ್ತ

Update: 2017-12-01 23:54 IST

ಹೊಸದಿಲ್ಲಿ, ಡಿ.1: ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದ್ದ ಭಾರತ ಕ್ರಿಕೆಟ್ ತಂಡ ಶನಿವಾರ ಇಲ್ಲಿ ಆರಂಭವಾಗಲಿರುವ ಮೂರನೇ ಪಂದ್ಯದಲ್ಲೂ ಶ್ರೀಲಂಕಾವನ್ನು ಸೋಲಿಸಿ ಸರಣಿ ಜಯಿಸುವ ವಿಶ್ವಾಸದಲ್ಲಿದೆ.

 ಕೋಲ್ಕತಾದಲ್ಲಿ ನಡೆದಿದ್ದ ಮಳೆಬಾಧಿತ ಮೊದಲ ಟೆಸ್ಟ್ ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದ ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಕೆ.ಎಲ್.ರಾಹುಲ್ ಎರಡನೇ ಇನಿಂಗ್ಸ್‌ನಲ್ಲಿ ಕ್ರಮವಾಗಿ 94 ಹಾಗೂ 79 ರನ್ ಗಳಿಸಿದ್ದರು.

ಧವನ್ ಎರಡನೇ ಟೆಸ್ಟ್‌ನಲ್ಲಿ ಆಡದ ಹಿನ್ನೆಲೆಯಲ್ಲಿ 11ರ ಬಳಗಕ್ಕೆ ಸೇರ್ಪಡೆಯಾಗಿದ್ದ ಮುರಳಿ ವಿಜಯ್ 128 ರನ್ ಗಳಿಸಿ ಗಮನ ಸೆಳೆದಿದ್ದರು. ಇದೀಗ ಧವನ್ ತಂಡಕ್ಕೆ ವಾಪಸಾಗಿದ್ದಾರೆ. ಮೂವರು ಆರಂಭಿಕ ಆಟಗಾರರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಗೊಂದಲದಲ್ಲಿದ್ದಾರೆ.

ಒಂದು ವೇಳೆ ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್‌ನಲ್ಲಿ ಆಡದೇ ಇದ್ದರೆ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ಕೊಹ್ಲಿ ಆಡಿದರೆ ಮೂವರಲ್ಲಿ ಓರ್ವ ಆರಂಭಿಕ ಆಟಗಾರ ಹೊರಗುಳಿಯಬೇಕಾಗುತ್ತದೆ. ಮಂದಬೆಳಕಿನಿಂದಾಗಿ ಮೊದಲ ಟೆಸ್ಟ್‌ನಲ್ಲಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದ ಭಾರತ ಎರಡನೇ ಟೆಸ್ ್ಟ ನಲ್ಲಿ ನಾಲ್ಕು ದಿನದೊಳಗೇ ಜಯಭೇರಿ ಬಾರಿಸಿತ್ತು.

ಕೊಹ್ಲಿ ಪಡೆ 2018ರಲ್ಲಿ ಕಠಿಣ ಟೆಸ್ಟ್ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಹೊಸ ವರ್ಷ ಆರಂಭಿಸಲಿರುವ ಭಾರತ ಆಬಳಿಕ ಇಂಗ್ಲೆಂಡ್ ವಿರುದ್ಧ 5 ಹಾಗೂ ಆಸ್ಟ್ರೆಲಿಯ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ವಿದೇಶಿ ನೆಲದಲ್ಲಿ ಆಡಲಿದೆ. ಈ ಮೂರು ಸರಣಿಗಳು ಕೊಹ್ಲಿಯ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿದೆ.

 ಮತ್ತೊಂದೆಡೆ, ಶ್ರೀಲಂಕಾ ತಂಡ ಹಿರಿಯ ಆಟಗಾರ ರಂಗನ ಹೆರಾತ್ ಅನುಪಸ್ಥಿತಿಯಲ್ಲಿ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಆಡಲಿದೆ. ಫಿರೋಝ್ ಶಾ ಕೊಟ್ಲಾ ಸ್ಟೇಡಿಯಂ ನಾಗ್ಪುರ ಪಿಚ್‌ನಂತೆ ಬ್ಯಾಟಿಂಗ್ ಸ್ನೇಹಿಯಲ್ಲ. 2015ರಲ್ಲಿ ಕೋಟ್ಲಾದಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ನಡೆದಿತ್ತು.

ತಂಡಗಳು

►ಭಾರತ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್,ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ರೋಹಿತ್ ಶರ್ಮ, ಆರ್.ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಉಮೇಶ್ ಯಾದವ್, ಮುಹಮ್ಮದ್ ಶಮಿ, ವಿಜಯ್ ಶಂಕರ್, ಕುಲ್‌ದೀಪ್ ಯಾದವ್.

►ಶ್ರೀಲಂಕಾ: ದಿನೇಶ್ ಚಾಂಡಿಮಾಲ್(ನಾಯಕ),ಡಿಮುತ್ ಕರುಣರತ್ನೆ, ಸದೀರ ಸಮರವಿಕ್ರಮ, ಲಹಿರು ತಿರಿಮನ್ನೆ, ನಿರೊಶನ್ ಡಿಕ್ವೆಲ್ಲಾ, ಆ್ಯಂಜೆಲೊ ಮ್ಯಾಥ್ಯೂಸ್, ದಿಲ್‌ರುವಾನ್ ಪೆರೇರ, ಜೆಫ್ರಿ ವಾಂಡರ್‌ಸೆ, ರೋಶನ್ ಸಿಲ್ವಾ, ದಶುನ್ ಶನಕ, ಸುರಂಗ ಲಕ್ಮಲ್, ಲಹಿರು ಗಾಮಗೆ, ಲಕ್ಷಣ್ ಸಂಡಕನ್, ಧನಂಜಯ ಡಿಸಿಲ್ವಾ.

ಹೈಲೈಟ್ಸ್

►ಭಾರತ 1990ರ ಬಳಿಕ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಈ ಅವಧಿಯಲ್ಲಿ ಭಾರತ ಆಡಿರುವ 11 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿದೆ. 2008ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದಿದ್ದ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.

►ಭಾರತ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಇಲ್ಲವೇ ಡ್ರಾ ಸಾಧಿಸಿದರೆ ಸತತ 9 ಸರಣಿಗಳನ್ನು ಗೆದ್ದ ಸಾಧನೆ ಮಾಡಲಿದೆ. ಈ ಮೂಲಕ 2005-06 ಹಾಗೂ 2008ರ ನಡುವೆ ಆಸ್ಟ್ರೇಲಿಯ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಲಿದೆ.

►ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಆರ್.ಅಶ್ವಿನ್ 14.22 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಪ್ರತಿ 7 ಓವರ್‌ಗೆ ಒಂದು ವಿಕೆಟ್ ಪಡೆದಿದ್ದಾರೆ.

►ಉಮೇಶ್ ಯಾದವ್ ಹಾಗೂ ದಿಲ್ರುವಾನ್ ಪೆರೇರ ತಲಾ 99 ವಿಕೆಟ್‌ಗಳೊಂದಿಗೆ ಮೂರನೇ ಟೆಸ್ಟ್ ಪಂದ್ಯಕ್ಕೆ ಕಾಲಿಡಲಿದ್ದಾರೆ. ಪೆರೇರ ಇನ್ನು ಮೂರು ವಿಕೆಟ್‌ಗಳನ್ನು ಕಬಳಿಸಿದರೆ ಶ್ರೀಲಂಕಾದ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುತ್ತಾರೆ. ಮುತ್ತಯ್ಯ ಮುರಳೀಧರನ್(795), ಹೆರಾತ್(406) ಹಾಗೂ ವಾಸ್(355) ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ತಂಡಗಳ ಸಮಾಚಾರ

►ಭಾರತ

ಗಾಯದ ಸಮಸ್ಯೆಯಿಂದಾಗಿ ನಾಗ್ಪುರ ಟೆಸ್ಟ್‌ನಿಂದ ಹೊರಗುಳಿದಿದ್ದ ವೇಗದ ಬೌಲರ್ ಮುಹಮ್ಮದ್ ಶಮಿ 3ನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆಯಿದೆ. ಉಮೇಶ್ ಯಾದವ್ ಸ್ಥಾನಕ್ಕೆ ಶಮಿ ಆಡಿದರೆ ಸರಣಿಯಲ್ಲಿ ಮೂವರು ವೇಗಿಗಳು ಎರಡು ಪಂದ್ಯ ಆಡಿದಂತಾಗುತ್ತದೆ. ಧವನ್ ತಂಡಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಆರಂಭಿಕ ಸ್ಥಾನಕ್ಕಾಗಿ ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ. ನೆಟ್ ಪ್ರಾಕ್ಟೀಸ್‌ನಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಅಭ್ಯಾಸ ನಡೆಸಿದ್ದು, ಮುರಳಿ ವಿಜಯ್ ಸ್ಥಾನ ಉಳಿಸಿಕೊಳ್ಳುವುದು ಖಚಿತವಾಗಿದೆ.

►ಶ್ರೀಲಂಕಾ

ಗಾಯಗೊಂಡಿರುವ ರಂಗನ ಹೆರಾತ್‌ರಿಂದ ತೆರವಾಗಿದ್ದ ಸ್ಥಾನಕ್ಕೆ ಎಡಗೈ ಚೈನಾಮನ್ ಬೌಲರ್ ಲಕ್ಷಣ್ ಸಂಡಕನ್ ನೇರ ಆಯ್ಕೆಯಾಗಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡುತ್ತಿರುವ ಲಹಿರು ತಿರಿಮನ್ನೆ ಸರಣಿಯಲ್ಲಿ 2 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಒಂದು ವೇಳೆ ತಿರಿಮನ್ನೆ ಹೊರಗುಳಿದರೆ ಅವರ ಸ್ಥಾನಕ್ಕೆ ಧನಂಜಯ ಡಿಸಿಲ್ವಾ ಆಡಲಿದ್ದಾರೆ. ಶನಕ ಆಲ್‌ರೌಂಡರ್ ಆಗಿ ತಂಡಕ್ಕೆ ಕಾಣಿಕೆ ನೀಡಲು ವಿಫಲವಾಗಿದ್ದು, ಹೊಸ ಮುಖ ರೋಶನ್ ಸಿಲ್ವಾ ಅವಕಾಶ ಪಡೆಯುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News