ನುಡಿಸಿರಿಯಲ್ಲಿ ‘ಮಾರ್ಜಾಲ’ಗಳ ಹೆಜ್ಜೆ !

Update: 2017-12-02 13:44 GMT

ಮೂಡುಬಿದಿರೆ, ಡಿ. 2: ಫ್ಯಾಶನ್ ಶೋಗಳಲ್ಲಿ ಕ್ಯಾಟ್‌ವಾಕ್ ಎಂಬುದನ್ನು ಕೇಳಿದ್ದೇವೆ. ಬೆಕ್ಕಿನ ತರಹ ಹೆಜ್ಜೆ ಅಂತ. ಆದರೆ ಆ ಬೆಕ್ಕುಗಳೇ ತಮ್ಮ ಸೌಂದರ್ಯ ವನ್ನು ಪ್ರದರ್ಶಿಸಿದರೆ ಹೇಗಿರೆಬಹುದು? ಹೌದು ಅಂತಹ ಒಂದು ಪ್ರದರ್ಶನಕ್ಕೆ ನುಡಿ ಹಬ್ಬ ನುಡಿಸಿರಿಯಲ್ಲಿ ಇಂದು ನಡೆಯಿತು.

ದಷ್ಟ ಪುಷ್ಟವಾದ, ಉದ್ದುದ್ದ ರೋಮಗಳನ್ನು ಹೊಂದಿದ ಬಣ್ಣ ಬಣ್ಣದ ಬೆಕ್ಕುಗಳು ಮೇಜಿನ ಮೇಲೆ ಗಾಂಭೀರ್ಯದ ನೋಟದೊಂದಿಗೆ ನೋಡುಗರನ್ನು ಆಕರ್ಷಿಸಿದವು. ವಿದೇಶಿ ತಳಿಯ ಈ ಮಾರ್ಜಲಗಳು ಒಂದಕ್ಕೊಂದು ಭಿನ್ನ. ಒಂದರ ಕಣ್ಣುಗಳು ಹಿರಿದಾಗಿದ್ದರೆ, ಮತ್ತೊಂದರ ಬಣ್ಣ, ಮತ್ತೊಂದರ ದೇಹ, ಇನ್ನೊಂದರ ಉದ್ದನೆಯ ರೋಮ. ಹೀಗೆ, ವೈವಿಧ್ಯತೆಯಿಂದ ಕೂಡಿದ ಬೆಕ್ಕುಗಳು ತಮ್ಮ ಮಾಲಕರೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದವು.

ಬೆಕ್ಕಿನ ಅಂದ ಚಂದ, ಎತ್ತರ, ಬಣ್ಣ ಹಾಗೂ ತಳಿಯ ಆಧಾರದಲ್ಲಿ ಪರ್ಶಿಯನ್ ತಳಿಯ ಪರ್ಶಿಯನ್ ಕ್ಯಾಟ್, ಬ್ರಿಟಿಷ್ ಶಾರ್ಟಿಯರ್ ಸೇರಿದಂತೆ ಒಟ್ಟು 20ಕ್ಕೂ ಅಧಿಕ ಬೆಕ್ಕುಗಳು ಪ್ರದರ್ಶನದಲ್ಲಿದ್ದವು. 

ಸಿನಿಸಿರಿ ನಡೆಯುತ್ತಿರುವ ಸಭಾಂಗಣದ ಡಾ. ಅಬ್ದುಲ್ ಕಲಾಂ ವೇದಿಕೆಯಲ್ಲಿ ನಡೆದ ಈ ಮಾರ್ಜಲ ಪ್ರದರ್ಶನವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಿದರು.

ಬೆಂಗಳೂರಿನ ಪಶು ಕಾಲೇಜಿನ ಡೀನ್ ಡಾ. ಯತಿರಾಜ್ ಹಾಗೂ ಡಾ. ಪಿ.ಎಸ್. ಹೆಗೆ್ಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಡಾ. ಯತಿರಾಜ್ ಬೆಕ್ಕುಗಳ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಬೆಕ್ಕುಗಳ ಪ್ರದರ್ಶನ ಶ್ವಾನ ಪ್ರದರ್ಶನಕ್ಕೆ ಸರಿಸಮಾನವಾಗಿ ಬೆಳೆದಿಲ್ಲ ಎಂದರು.

ಬೆಕ್ಕುಗಳು ಶ್ವಾನಗಳಂತೆ ವಿಶ್ವಾಸನೀಯ ಪ್ರಾಣಿ ಅಲ್ಲವಾದರೂ ಮನೆಗಳಲ್ಲಿ ಇದನ್ನು ಮುದ್ದಿನಿಂದ ಸಾಕಲಾಗುತ್ತದೆ. ಬೆಕ್ಕುಗಳಲ್ಲಿ ಸುಮಾರು 75 ತಳಿಗಳನ್ನು ಗುರುತಿಸಲಾಗಿದೆ ಎಂದವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News