ವೇದಿಕೆಯ ಹಂಗಿಲ್ಲದ ಕಲಾವಿದರಿವರು....!

Update: 2017-12-02 15:13 GMT

ಮೂಡಬಿದ್ರೆ, ಡಿ. 2: ಮೂಡಬಿದ್ರೆ ವಿದ್ಯಾಗಿರಿಯ 100 ಎಕರೆಗೂ ಅಧಿಕ ವಿಸ್ತೀರ್ಣದ ವಿಶಾಲ ಕ್ಯಾಂಪಸ್‌ನಲ್ಲಿ ನುಡಿ ಹಬ್ಬವಾದ ನುಡಿಸಿರಿ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ, ಕಲೆ, ಕ್ರೀಡೆ, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ನಡುವೆಯೇ ಕ್ಯಾಂಪಸ್‌ನ ಅಲ್ಲಲ್ಲಿ ವೇದಿಕೆಯ ಹೊರತಾಗಿಯೂ ಕೆಲ ಕಲಾ ತಂಡಗಳು ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಾ ನೋಡುಗರನ್ನು ಸೆಳೆಯುತ್ತಿರುವುದನ್ನು ಕಾಣಬಹುದು.

ನೋಡುಗರು, ಕೇಳುಗರಿರುವ ನಡುವೆ ತಾವಿದ್ದ ಜಾಗವನ್ನೇ ವೇದಿಕೆಯನ್ನಾಗಿಸಿ ನಾಡಿನ ವಿವಿಧ ಮೂಲೆಗಳ ಕಲಾ ತಂಡಗಲು ನುಡಿಸಿರಿಯಲ್ಲಿ ತಮ್ಮ ಕಲಾ ವೈಭವವನ್ನು ಪ್ರದರ್ಶಿಸುತ್ತಿದ್ದಾರೆ. 

10 ವರ್ಷಗಳಿಂದ ಇವರು ನುಡಿಸಿರಿಯ ಭಾಗ!

ಉಡುಪಿ ಬಾರ್ಕೂರಿನ ಹುಭಾಶಿಕ ಕೊರಗರ ಯುವ ಕಲಾ ವೇದಿಕೆ ಸದಸ್ಯರು ಕಳೆದ 10 ವರ್ಷಗಳಿಂದ ನುಡಿಸಿರಿಯಲ್ಲಿ ಭಾಗವಹಿಸುತ್ತಿದ್ದಾರೆ. ಕರಾವಳಿಯ ಮೂಲ ಸಮಾಜವಾಗಿ ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಕೊರಗರ ಕಲಾ ವೈಭವವನ್ನು ತಮ್ಮ ಕೊಳಲು, ಡೋಲುಗಳ ಮೂಲಕ ಇವರು ನುಡಿಸಿರಿಗೆ ಬರುವ ಕಲಾಸಕ್ತರು, ಸಾಹಿತ್ಯಾಭಿಮಾನಿಗಳಿಗೆ ಪ್ರದರ್ಶಿಸುತ್ತಿದ್ದಾರೆ.

ಡಾ. ಮೋಹನ್ ಆಳ್ವಾರವರಿಗೆ ನಮ್ಮ ಡೋಲು ಕುಣಿತದ ಬಗ್ಗೆ ಅಪಾರ ಪ್ರೀತಿ. ಪ್ರತಿ ವರ್ಷವೂ ಯಾವುದೇ ಕಾರ್ಯಕ್ರಮವಿದ್ದರೂ ನಮಗೆ ಆಹ್ವಾನ ನೀಡಿ ಆದರ ತೋರಿಸುತ್ತಾರೆ. ನಮಗೂ ನಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತಿದ್ದಾರೆ ಎನ್ನುತ್ತಾೆ ವೇದಿಕೆಯ ಸದಸ್ಯರಾದ ರಾಜೇಶ್.
ದಣಿವಾರಿಸುವ ಹಾಡುಗಾರಿಕೆ ಈ ಮಹಿಳಾ ತಂಡದ್ದು!

ರಾಗಿ ಬೀಸುವಾಗ, ಮದುವೆ ಸಂಭ್ರಮ, ಸೋಬಾನ, ಉಳುಮೆ ಸೇರಿದಂತೆ ಜೀವನದ ಪ್ರತಿಯೊಂದು ಸಂತಸದ ಸಂಭ್ರಮಗಳಲ್ಲೂ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜನಪದ ಹಾಡುಗಳನ್ನು ನಿರರ್ಗಳವಾಗಿ ಹಾಡುವ ಈ ಮಹಿಳಾ ಮಣಿಯರು ಕಳೆದ ಮೂರು ವರ್ಷಗಳಿಂ ನುಡಿಸಿರಿಯಲ್ಲಿ ಭಾಗವಹಿಸುತ್ತಿದ್ದಾರೆ.

ಬಳ್ಳಾರಿಯ ಹಡಗಲಿಯ ದುರ್ಗಾಂಬಿಕಾ ಸಂಘದ 15 ಮಂದಿ ಸದಸ್ಯರು ಈ ಬಾರಿಯೂ ನುಡಿಸಿರಿಯಲ್ಲಿ ತಮ್ಮ ಜನಪದ ಗಾನಸುಧೆಯ ಮೂಲಕ ಉರಿ ಬಿಸಿಲಲ್ಲೂ ದಣಿವಾರಿಸುವ ಗಾನ ಮಾಧುರ್ಯತೆಯೊಂದಿಗೆ ಕಿವಿ ತಂಪಾಗಿಸುತ್ತಾರೆ.

ಇಲ್ಲಿನವರು ತೋರಿಸುವ ಪ್ರೀತಿಯಿಂದಾಗಿ ನಾವು ಇಲ್ಲಿ ಮತ್ತೆ ಮತ್ತೆ ಬರುವಂತಾಗಿದೆ. ಮೊದಲ ವರ್ಷದಲ್ಲಿ ನಮಗೆ ವೇದಿಕೆಯಲ್ಲಿ ಹಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ನಾವು ಅಲ್ಲಲ್ಲಿ ಅಂಗಣದಲ್ಲಿ ಹಾಡುತ್ತಿದ್ದೇವೆ. ಆದರೂ ಖುಷಿ ಇದೆ. ಮಕ್ಕಳು ನಮ್ಮಿಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಇಲ್ಲಿನವರ ಕಲಾ ಪ್ರೇಮ, ಸಂಗೀತಾಸಕ್ತಿ ಕಂಡಾಗ ಮನ ತುಂಬಿ ಬರುತ್ತದೆ. ಇಲ್ಲಿ ಊಟ, ವಸತಿ ವ್ಯವಸ್ಥೆಯನ್ನೂ ಚೆನ್ನಾಗಿ ಒದಗಿಸುತ್ತಾರೆ. ನಮಗೆ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಲ್ಲಿ ನಮಗೆ ಇನ್ನಷ್ಟು ಗೌರವ ದೊರಕಿದಂತೆ ಎಂದು ಸಂಘದ ಹಿರಿಯರಾದ ಹೊನ್ನಮ್ಮ ಮತ್ತು ಕಾಳಮ್ಮ ಅಭಿಪ್ರಾಯಿಸಿದರು.
 

ಲಂಬಾಣಿ ನೃತ್ಯವೂ ಇಲ್ಲಿದೆ...!

ಬಿಜಾಪುರದ ಶ್ರೀ ಸೇವಾಲಾಲ ಕಲಾವಿದರ ಸಂಘದ ಲಂಬಾಣಿ ನೃತ್ಯವೂ ಗಮನ ಸೆಳೆಯುತ್ತಿದೆ. ವಿಶೇಷ ಉಡುಗೆ ತೊಡುಗೆಗಳಿಂದ ಆಕರ್ಷಿಸುವ ಲಂಬಾಣಿಗರು ತಮ್ಮ ನೃತ್ಯದ ಮೂಲಕವೂ ನುಡಿಸಿರಿಯಲ್ಲಿ ಕಲಾ ರಸಿಕರನ್ನು ಸೆಳೆಯುತ್ತಿದ್ದಾರೆ.

ತಂಡದಲ್ಲಿ 25 ಕಲಾವಿದರಿದ್ದು, ಪುರುಷರು ಡೋಲಕ್, ಚಕ್ರತಾಳದೊಂದಿಗೆ ಹೊರಹೊಮ್ಮಿಸುವ ಸಂಗೀತದ ಇಂಪಿಗೆ ಮಹಿಳಾ ಲಂಬಾಣಿಗರು ಹೆ್ಜೆ ಹಾಕುತ್ತಾ ಮನ ಸೆಳೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News