ಇವಿಎಂ ಅಕ್ರಮದಿಂದ ಬಿಜೆಪಿಗೆ ಗೆಲುವು: ಮಾಯಾ, ಅಖಿಲೇಶ್ ಆರೋಪ
ಲಕ್ನೋ,ಡಿ.2: ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಅಕ್ರಮಗಳನ್ನು ನಡೆಸಿದ ಪರಿಣಾಮವಾಗಿ ಆಡಳಿತಾರೂಢ ಬಿಜೆಪಿಯು ಉತ್ತರಪ್ರದೇಶ ಪೌರಾಡಳಿತ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆಯೆಂದು ಬಿಎಸ್‌ಪಿ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಆರೋಪಿಸಿದ್ದಾರೆ.
‘‘ಒಂದು ವೇಳೆ ಬಿಜೆಪಿ ಪ್ರಾಮಾಣಿಕವಾಗಿದ್ದರೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದರೆ, ಅದು ಮತಯಂತ್ರಗಳನ್ನು ಕೈಬಿಟ್ಟು, ಬ್ಯಾಲೆಟ್ ಪೇಪರ್‌ಗಳ ಮೂಲಕ ಮತದಾನ ನಡೆಸಬೇಕು. ಜನತೆ ನಮ್ಮಾಂದಿಗಿದ್ದಾರೆಂದು ಬಿಜೆಪಿ ನಂಬಿದ್ದೇ ಆದಲ್ಲಿ ಅದನ್ನು ಜಾರಿಗೊಳಿಸಬೇಕಿದೆ. ಒಂದು ವೇಳೆ ಬ್ಯಾಲೆಟ್‌ಪೇಪರ್‌ಗಳನ್ನು ಚುನಾವಣೆಗೆ ಬಳಸಿದಲ್ಲಿ, ಬಿಜೆಪಿ ಅಧಿಕಾರಕ್ಕೆ ಬರಲಾರದೆಂದು ನಾನು ಖಾತರಿ ನೀಡುತ್ತೇನೆ’’ ಎಂದು ಮಾಯಾವತಿ ಲಕ್ನೋದಲ್ಲಿ ತಿಳಿಸಿದ್ದಾರೆ.
ಮತದಾನಕ್ಕೆ ಇವಿಎಂಗಳು ಬಳಕೆಯಾದ ದೊಡ್ಡ ನಗರಗಳಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದರೆ, ಬ್ಯಾಲೆಟ್‌ಪೇಪರ್‌ಗಳು ಬಳಕೆಯಾಗಿರುವ ಸಣ್ಣ ಪಟ್ಟಣಗಳಲ್ಲಿ ಬಿಜೆಪಿಯು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿಲ್ಲ ಎಂದು ಬಿಎಸ್‌ಪಿ ಹೇಳಿದೆ. ಸಣ್ಣ ಪಟ್ಟಣಗಳ ಪೌರಾಡಳಿತ ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವ ಬಗ್ಗೆ ಅವರು ಗಮನಸೆಳೆದಿದ್ದಾರೆ.
ಮಾಯಾವತಿಯವರ ಆರೋಪಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಧ್ವನಿಗೂಡಿಸಿದ್ದಾರೆ. ಮತಯಂತ್ರಗಳು ಬಳಕೆಯಾದ ಕಡೆಗಳಲ್ಲಿ ಬಿಜೆಪಿ ಶೇ.46 ಸ್ಥಾನಗಳನ್ನು ಗೆದ್ದಿದ್ದರೆ, ಬ್ಯಾಲೆಟ್ ಪೇಪರ್ ಬಳಕೆಯಾದ ಕಡೆಗಳಲ್ಲಿ ಅದು ಕೇವಲ ಶೇ.15 ಸ್ಥಾನಗಳನ್ನು ಗೆದ್ದಿದೆ’’ ಎಂದವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ 16 ನಗರಪಾಲಿಕೆ ಗಳಿಗೆ ನಡೆದ ಚುನಾವಣೆಗಳಲ್ಲಿ 14ರಲ್ಲಿ ಬಿಜೆಪಿ ಜಯಿಸಿದ್ದು, ಎರಡನ್ನು ಬಿಎಸ್‌ಪಿ ಗೆದ್ದುಕೊಂಡಿದೆ. ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳು ಒಂದೇ ಒಂದು ಪಾಲಿಕೆಯಲ್ಲೂ ಅಧಿಕಾರ ಹಿಡಿಯಲು ವಿಫಲವಾಗಿವೆ. ಆದಾಗ್ಯೂ ಚುನಾವಣೆಗೆ ಮತಪತ್ರಗಳು ಬಳಕೆಯಾದ ಸಣ್ಣ ಪಟ್ಟಣಗಳಲ್ಲಿ 198 ಪುರಸಭಾಧ್ಯಕ್ಷರ ಹುದ್ದೆಗಳಲ್ಲಿ ಕೇವಲ 70 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದ್ದರೆ, ಪಕ್ಷೇತರ ಅಭ್ಯರ್ಥಿಗಳು 43ರಲ್ಲಿ ಗೆಲುವಿನ ನಗೆಬೀರಿದ್ದಾರೆ. 5261 ಪುರಸಭಾ ಸದಸ್ಯ ಸ್ಥಾನಗಳಲ್ಲಿ ಬಿಜೆಪಿ ಕೇವಲ 922 ಸ್ಥಾನಗಳಲ್ಲಿ ವಿಜಯಗಳಿಸಿದ್ದರೆ, ಪಕ್ಷೇತರರು 3380 ಸ್ಥಾನಗಳನ್ನು ಗೆದ್ದಿದ್ದಾರೆ. 438 ನಗರಪಂಚಾಯತ್ ವರಿಷ್ಠ ಹುದ್ದೆಗಳಲ್ಲಿ ಬಿಜೆಪಿಯು 100ಹಾಗೂ ಪಕ್ಷೇತರರು 182 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಪ್ರತಿಪಕ್ಷಗಳ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ಅವು ಚುನಾವಣಾ ಸೋಲಿನಿಂದ ಹತಾಶಗೊಂಡಿವೆಯೆಂದು ಟೀಕಿಸಿದೆ. ಮಾಯಾವತಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, 2019ರ ಚುನಾವಣೆಗೆ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ. ಈಗಾಗಲೇ ಪ್ರತಿಪಕ್ಷಗಳು ತಮ್ಮ ಸೋಲಿಗೆ ನೆಪಗಳನ್ನು ಹುಡುಕಲಾರಂಭಿಸಿವೆ’’ ಎಂದು ಟೀಕಿಸಿದ್ದಾರೆ.