×
Ad

ರಶ್ಯ ಭೇಟಿಯ ಬಗ್ಗೆ ಎಫ್‌ಬಿಐಗೆ ನಾನು ನೀಡಿದ ಹೇಳಿಕೆಗಳು ಸುಳ್ಳು

Update: 2017-12-02 21:25 IST

ವಾಶಿಂಗ್ಟನ್, ಡಿ. 2: 2016ರ ಡಿಸೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಸಂದರ್ಭದಲ್ಲಿ, ಅಮೆರಿಕಕ್ಕೆ ರಶ್ಯದ ರಾಯಭಾರಿ ಜೊತೆಗೆ ನಡೆಸಿದ ಎರಡು ಸಂದರ್ಶನಗಳ ಬಗ್ಗೆ ತಾನು ಎಫ್‌ಬಿಐ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿರುವುದನ್ನು ಟ್ರಂಪ್‌ರ ಮಾಜಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಮೈಕಲ್ ಫ್ಲಿನ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.

ಇತರ ಸಂದರ್ಭಗಳಲ್ಲಿಯೂ ತಾನು ತಪ್ಪು ಹೇಳಿಕೆಗಳನ್ನು ನೀಡಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.

 ಆಗಿನ ಅಧ್ಯಕ್ಷ ಬರಾಕ್ ಒಬಾಮ ರಶ್ಯದ ವಿರುದ್ಧ ವಿಧಿಸಿದ ದಿಗ್ಬಂಧನಗಳು ಹಾಗೂ ಇಸ್ರೇಲ್‌ಗೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆಯಲಿರುವ ಮತದಾನದ ಬಗ್ಗೆ ಫ್ಲಿನ್ ರಶ್ಯದ ರಾಯಭಾರಿ ಸರ್ಗಿ ಕಿಸಲ್ಯಾಕ್ ಜೊತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

ತನ್ನ ಈ ಮಾತುಕತೆಗಳ ಬಗ್ಗೆ ಎಫ್‌ಬಿಐಗೆ ತಪ್ಪು ಹೇಳಿಕೆಗಳನ್ನು ನೀಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.

ರಶ್ಯನ್ನರನ್ನು ಸಂಪರ್ಕಿಸಲು ಟ್ರಂಪ್ ಅಧಿಕಾರ ಸ್ವೀಕಾರ ತಂಡ ತನಗೆ ಸೂಚನೆ ನೀಡಿತ್ತು ಎಂಬುದಾಗಿ ಫ್ಲಿನ್ ಹೇಳಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ವಾಶಿಂಗ್ಟನ್‌ನ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.

ಟ್ರಂಪ್ ತಂಡವು ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಅವಧಿಯಲ್ಲಿ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರನ್ನು ಸೋಲಿಸಲು ರಶ್ಯದೊಂದಿಗೆ ಸಂಪರ್ಕದಲ್ಲಿತ್ತು ಎಂಬ ಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ.

ಫ್ಲಿನ್ ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳು ಟ್ರಂಪ್ ಮೇಲಿನ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಜನವರಿಯಲ್ಲಿ ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹಾಗಾರನಾಗಿ ನೇಮಕಗೊಂಡಿದ್ದ ಫ್ಲಿನ್ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಟ್ರಂಪ್ ತಂಡದಿಂದ ಸೂಚನೆ ಪಡೆದೆ

ರಶ್ಯದ ರಾಯಭಾರಿ ಜೊತೆಗೆ ಏನು ಮಾತಾಡಬೇಕು ಎಂಬ ಬಗ್ಗೆ ಫ್ಲೋರಿಡದಲ್ಲಿರುವ ಟ್ರಂಪ್‌ರ ರಿಸಾರ್ಟ್ ‘ಮಾರ್-ಇ-ಲಾಗೊ’ದಲ್ಲಿರುವ ‘ಹಿರಿಯ ಅಧಿಕಾರಿ’ಯೊಂದಿಗೆ ಹಾಗೂ ಇಸ್ರೇಲ್ ಕುರಿತ ಮತದಾನದ ಬಗ್ಗೆ ಟ್ರಂಪ್ ಅಧಿಕಾರ ಸ್ವೀಕಾರ ತಂಡದ ‘ಅತ್ಯಂತ ಹಿರಿಯ ಸದಸ್ಯ’ರೊಬ್ಬರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಫ್ಲಿನ್ ಹೇಳಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಟರ್ಕಿ ಸರಕಾರದಿಂದ ಕೆಲಸದ ಗುತ್ತಿಗೆಯನ್ನು ಪಡೆಯುವುದಕ್ಕಾಗಿ ತನ್ನ ‘ಫ್ಲಿನ್ ಇಂಟೆಲ್ ಗ್ರೂಪ್’ ಕಂಪೆನಿಯನ್ನು ನೋಂದಾಯಿಸುವಾಗಲೂ ಎರಡು ತಪ್ಪು ಹೇಳಿಕೆಗಳನ್ನು ನೀಡಿದ ಆರೋಪವನ್ನು ಫ್ಲಿನ್ ವಿರುದ್ಧ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News