ಚಂಡಮಾರುತ ಪೀಡಿತ ತಮಿಳುನಾಡಿಗೆ ನಿರ್ಮಲಾ ಸೀತಾರಾಮನ್ ಭೇಟಿ

Update: 2017-12-03 13:58 GMT

ಚೆನ್ನೈ,ಡಿ.3: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಒಖಿ ಚಂಡಮಾರುತದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಮಿಳುನಾಡಿಗೆ ಭೇಟಿ ನೀಡಿದ್ದು, ಕನ್ಯಾಕುಮಾರಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಪ್ರಕ್ಷುಬ್ಧ ಸಮುದ್ರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒಟ್ಟು 357 ಮೀನುಗಾರರನ್ನು ರವಿವಾರ ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಅವರು ಟ್ವೀಟಿಸಿದ್ದಾರೆ.

ತಮಿಳುನಾಡಿನ 71, ಕೇರಳದ 248 ಮತ್ತು ಲಕ್ಷದ್ವೀಪ ನಡುಗಡ್ಡೆಗಳಿಂದ 38 ಮೀನುಗಾರರು ಸೇರಿದಂತೆ ಒಟ್ಟು 357 ಮೀನುಗಾರರನ್ನು ವಾಯುಪಡೆ, ನೌಕಾಪಡೆ ಮತ್ತು ತಟ ರಕ್ಷಣಾ ಪಡೆಗಳ ಸಿಬ್ಬಂದಿಗಳು ರವಿವಾರ ರಕ್ಷಿಸಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.

ತಿರುವನಂತಪುರ ವರದಿ: ಒಖಿ ಚಂಡಮಾರುತಕ್ಕೆ ಸಿಲುಕಿ ಕಳೆದ ಐದು ದಿನಗಳಿಂದ ಸಮುದ್ರದಲ್ಲಿ ಬಾಕಿಯಾಗಿದ್ದ 17 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ. ಐಎನ್‌ಎಸ್ ಕಲ್ಪೇನಿಯು ರವಿವಾರ ಬೆಳಿಗ್ಗೆ ಆಳಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ 13 ಮೀನುಗಾರರನ್ನು ರಕ್ಷಿಸಿ ಕೊಲ್ಲಂನಲ್ಲಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಕಾಯಂಕುಳಂನಿಂದ ಪಶ್ಚಿಮಕ್ಕೆ ಸುಮಾರು 30 ಕಿ.ಮೀ.ದೂರದ ಕಡಲಲ್ಲಿ ನಾಲ್ವರು ಮೀನುಗಾರರನ್ನು ವಾಯುಪಡೆಯ ಹೆಲಿಕಾಪ್ಟರ್ ರಕ್ಷಿಸಿದ್ದು, ಅವರನ್ನು ತಿರುವನಂತಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಯುಪಡೆಯ ನಾಲ್ಕು, ನೌಕಾಪಡೆಯ ಮೂರು ವಿಮಾನಗಳು ಮತ್ತು 10 ಹಡಗುಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ತಟರಕ್ಷಣಾ ಪಡೆಯ ಹಡಗುಗಳನ್ನೂ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ.

ಕೊಚ್ಚಿ ತಟರಕ್ಷಣಾ ಪಡೆಯ ಹೆಲಿಕಾಪ್ಟರ್ ಓರ್ವ ವ್ಯಕ್ತಿಯನ್ನು ರಕ್ಷಿಸಿದ್ದರೆ, ಹಡಗೊಂದು ಸಮುದ್ರಮಧ್ಯೆ ದೋಣಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒಂಭತ್ತು ಮೀನುಗಾರರನ್ನು ರಕ್ಷಿಸಿದೆ.

203 ಮೀನುಗಾರರಿರುವ ಸುಮಾರು 20 ದೋಣಿಗಳು ಲಕ್ಷದ್ವೀಪದ ವಿವಿಧ ನಡುಗಡ್ಡೆಗಳ ಬಳಿ ಆಶ್ರಯ ಪಡೆದುಕೊಂಡಿವೆ.

ತನ್ಮಧ್ಯೆ ಕೇರಳ ಸರಕಾರವು ರಕ್ಷಣಾ ಕಾರ್ಯವನ್ನು ಚುರುಕಾಗಿ ನಡೆಸಿಲ್ಲವೆಂದು ಮೀನುಗಾರರು ಮತ್ತು ಅವರ ಕುಟುಂಬಗಳು ಆರೋಪಿಸಿದ್ದು, ಕೇರಳ ಕರಾವಳಿಯಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ.

ಐದು ದಿನಗಳ ಹಿಂದೆ ಪುಣ್ತೂರ್‌ನಿಂದ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದ 33 ಮೀನುಗಾರರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ರವಿವಾರ ನಸುಕಿನಲ್ಲಿ ಮಿನುಗಾರರು 40 ಸಣ್ಣ ದೋಣಿಗಳಲ್ಲಿ ಆಳಸಮುದ್ರಕ್ಕೆ ತೆರಳಿದ್ದು, ಬಳಿಕ ಸ್ವಲ್ಪಹೊತ್ತಿನಲ್ಲಿ ರಕ್ಷಣಾ ಕಾರ್ಯಕರ್ತರು ಮೃತದೇಹವೊಂದನ್ನು ಪತ್ತೆ ಹಚ್ಚಿ ತೀರಕ್ಕೆ ತಂದಿದ್ದಾರೆ.

ತನ್ಮಧ್ಯೆ ಒಖಿ ಚಂಡಮಾರುತ ಉತ್ತರ-ವಾಯುವ್ಯಾಭಿಮುಖವಾಗಿ ಚಲಿಸಿದ್ದು, ಲಕ್ಷದ್ವೀಪದ ಅಮಿನಿ ದಿವಿ ನಡುಗಡ್ಡೆಯಿಂದ 390 ಕಿ.ಮೀ.ದೂರದಲ್ಲಿ ಆಗ್ನೇಯ ಮತ್ತು ಪೂರ್ವ-ಮಧ್ಯ ಅರಬ್ಬೀ ಸಮುದ್ರದ ಮೇಲೆ ಸ್ಥಿತಗೊಂಡಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಮುಂದಿನ 12 ಗಂಟೆಗಳಲ್ಲಿ ಉತ್ತರ ಲಕ್ಷದ್ವೀಪದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

ಒಖಿ ಚಂಡಮಾರುತದ ಅಬ್ಬರಕ್ಕೆ ಈವರೆಗೆ ತಮಿಳುನಾಡು ಮತ್ತು ಕೇರಳದಲ್ಲಿ 14 ಜನರು ಮತ್ತು ಶ್ರೀಲಂಕಾದಲ್ಲಿ 13 ಜನರು ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News