"ಆ ಕ್ಷಣಗಳಲ್ಲಿ ರಕ್ತ ತಣ್ಣಗಾಗಿ ಹೋಗಿತ್ತು"
ತಿರುವನಂತಪುರಂ, ಡಿ.3: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಓಖಿ ಚಂಡಮಾರುತದ ಸುಳಿಗೆ ಸಿಲುಕಿ ಪಾರಾಗಿ ಬಂದವರು ತಮಗಾದ ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ.
"ಸಮುದ್ರದ ನೀರಿನಲ್ಲಿ ಹಲಗೆ, ಟ್ಯೂಬ್‍ಗಳ ಮೇಲೆ ಗಂಟೆಗಟ್ಟಲೆ ಮಲಗಿದ್ದೆವು. ಆ ಕ್ಷಣಗಳಲ್ಲಿ ನಮ್ಮ ರಕ್ತ ತಣ್ಣಗಾಗಿ ಹೋಗಿತ್ತು. ದೋಣಿ ಮಗುಚಿದ ಬಳಿಕ ಒಂದು ಮೀಟರ್‍ನಷ್ಟು ಆಳಕ್ಕೆ ಹೋದ ಬಳಿಕ ಮೇಲೆ ಬಂದೆವು. ಜೀವ ಉಳಿಸಲು ಈಜಿದೆವು. ಸಮುದ್ರದಲ್ಲೇ ಜೀವನ ಕಟ್ಟಿಕೊಂಡವರಾಗಿದ್ದರೂ ಬೃಹತ್ ಗಾತ್ರದ ಅಲೆಗಳ ಮುಂದೆ ಅಸಹಾಯಕರಾಗಿ ನಿಲ್ಲಬೇಕಾಯಿತು" ಎಂದು ಪಾರಾಗಿ ಬಂದವರಲ್ಲಿ ಒಬ್ಬರು ತಮ್ಮ ಅನುಭವವನ್ನು ವಿವರಿಸಿದ್ದಾರೆ.
"ಸಮೀಪದಿಂದಲೇ ಬೋಟುಗಳು ಹಾದು ಹೋದಾಗ ಕಿರುಚಿಕೊಂಡರೂ ಅದರಲ್ಲಿರುವವರ ಗಮನಕ್ಕೆ ಬರಲಿಲ್ಲ. ಗಾಢ ಕತ್ತಲು, ಮಳೆಯಿಂದ ನಾವು ಅಸಹಾಯಕರಾಗಿದ್ದೆವು. ಹೇಗೋ ರಕ್ಷಣಾ ಕಾರ್ಯದಲ್ಲಿ ನಿರತರಾದವರ ಕಣ್ಣಿಗೆ ಬಿದ್ದು ಬದುಕಿದ್ದೇವೆ" ಎನ್ನುತ್ತಾರೆ ಅವರು.
ಹೀಗೆ ಪಾರಾದ ಮೀನುಗಾರರು ಜೀವ ಉಳಿದ ಸಂತೋಷದಲ್ಲಿದ್ದರೂ ಸಂಪಾದನೆಯ ದಾರಿ ಮುಚ್ಚಿ ಹೋಗಿದೆ. ಸಂಪಾದನೆಯ ದಾರಿಯಾಗಿದ್ದ ಬೋಟುಗಳೆಲ್ಲವೂ ಸಮುದ್ರ ಪಾಲಾಗಿದೆ.