×
Ad

ಅಲ್ಲಾಹು ಎಂದ 6 ವರ್ಷದ ಬಾಲಕನ ವಿಚಾರಣೆಗೆ ಪೊಲೀಸರನ್ನು ಕರೆಸಿದ ಶಿಕ್ಷಕ!

Update: 2017-12-03 21:36 IST

ಹ್ಯೂಸ್ಟನ್, ಡಿ.3: ಬೌದ್ಧಿಕ ಭಿನ್ನಸಾಮರ್ಥ್ಯದಿಂದ ಬಳಲುತ್ತಿದ್ದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲಿ ‘ಅಲ್ಲಾಹು’ ಹಾಗೂ ‘ಬೂಮ್’ ಪದಗಳನ್ನು ಪುನರುಚ್ಚರಿಸಿದ್ದಕ್ಕಾಗಿ ಶಿಕ್ಷಕನೊಬ್ಬ ಪೊಲೀಸರನ್ನು ಕರೆಸಿದ ಘಟನೆ ನಡೆದಿದೆ.

'ಡೌನ್ ಸಿಂಡ್ರೋಮ್’ ಕಾಯಿಲೆಯೊಂದಿಗೆ ಜನಿಸಿದ್ದ ಆರು ವರ್ಷದ ಬಾಲಕ ಮುಹಮ್ಮದ್ ಸುಲೈಮಾನ್, ಬೌದ್ಧಿಕ ಭಿನ್ನಸಾಮರ್ಥ್ಯದಿಂದ ಬಳಲುತ್ತಿದ್ದಾನೆಂದು ಆತನ ತಂದೆ ತಿಳಿಸಿದ್ದಾರೆ. ಹ್ಯೂಸ್ಟನ್‌ನಿಂದ 32 ಕಿ.ಮೀ. ದೂರದಲ್ಲಿರುವ ಪರ್ಲ್‌ಲ್ಯಾಂಡ್ ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಸುಲೈಮಾನ್ ನ ಶಿಕ್ಷಕರೊಬ್ಬರು ಉದ್ಯೋಗವನ್ನು ತೊರೆದಿದ್ದರು. ಬಳಿಕ ಅವರ ಬದಲಿಗೆ ಬೇರೊಬ್ಬ ಶಿಕ್ಷಕರು ನೇಮಕವಾಗಿದ್ದರು. ಸುಲೈಮಾನ್ ತರಗತಿಯಲ್ಲಿ 'ಅಲ್ಲಾಹು' ಹಾಗೂ 'ಬೂಮ್' ಪದಗಳನ್ನು ಪುನರುಚ್ಚರಿಸುತ್ತಿದ್ದುದನ್ನು ಕಂಡು ಈ ಶಿಕ್ಷಕ ಪೊಲೀಸರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

ಈ ಆರೋಪಗಳಿಂದ ತಾನು ತೀರಾ ನೊಂದಿದ್ದೇನೆ ಎಂದು ಬಾಲಕನ ತಂದೆ ತಿಳಿಸಿದ್ದಾರೆ. ಮುಹಮ್ಮದ್ ಸುಲೈಮಾನ್‌ಗೆ ಸರಿಯಾಗಿ ಮಾತನಾಡಲಾಗುವುದಿಲ್ಲ ಹಾಗೂ ಆತ ಒಂದು ವರ್ಷದ ಮಗುವಿನ ಬೌದ್ಧಿಕ ಸಾಮರ್ಥ್ಯವನ್ನಷ್ಟೇ ಹೊಂದಿದ್ದಾನೆಂದು ಅವರು ಹೇಳಿದ್ದಾರೆ.

ಈ ಮಧ್ಯೆ ಪರ್ಲ್‌ಲ್ಯಾಂಡ್ ಪೊಲೀಸ್ ಇಲಾಖೆಯು ಹೇಳಿಕೆಯೊಂದನ್ನು ನೀಡಿ, ಘಟನೆಗೆ ಸಂಬಂಧಿಸಿ ತನಿಖೆಯನ್ನು ಪೂರ್ಣಗೊಳಿಸಿದ್ದು, ಯಾವುದೇ ಮುಂದಿನ ಕ್ರಮ ಕೈಗೊಳ್ಳುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಆದಾಗ್ಯೂ, ಬಾಲಕನನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದಕ್ಕೆ ಸಂಬಂಧಿಸಿ ತಾನು ವಿಚಾರಣೆ ನಡೆಸುತ್ತಿರುವುದಾಗಿ ಪ್ರಾದೇಶಿಕ ಶಿಶು ಸಂರಕ್ಷಣಾ ಸೇವಾ ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News