ವಾಯು ಮಾಲಿನ್ಯ : 20 ನಿಮಿಷ ಆಟ ಸ್ಥಗಿತ

Update: 2017-12-03 18:01 GMT

ಹೊಸದಿಲ್ಲಿ, ಡಿ.3: ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ನಲ್ಲಿ ಹೊಗೆ ಕಾಟದಿಂದಾಗಿ 20 ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತು.

 122.3 ಓವರ್ ಕೊನೆಗೊಳ್ಳುತ್ತಿದ್ದಂತೆ ಶ್ರೀಲಂಕಾದ ಆಟಗಾರರು ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಆಡಲು ಅಸಮ್ಮತಿ ಸೂಚಿಸಿದರು. ಈ ಕಾರಣದಿಂದಾಗಿ ಆಟ ಸ್ವಲ್ಪ ಹೊತ್ತು ಸ್ಥಗಿತಗೊಡಿತು. ಅಷ್ಟು ಹೊತ್ತಿಗೆ ಕೊಹ್ಲಿ ದ್ವಿಶತಕ ದಾಖಲಿಸಿದ್ದರು.

 ಊಟದ ವಿರಾಮದ ತನಕ ಆಟಕ್ಕೆ ಯಾವುದೇ ತಡೆ ಇರಲಿಲ್ಲ. ಬಳಿಕ ಲಂಕಾದ ಕೆಲವು ಆಟಗಾರರಾದ ನಾಯಕ ದಿನೇಶ್ ಚಾಂಡಿಮಾಲ್ , ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್, ರೋಶನ್ ಸಿಲ್ವ ಮತ್ತು ಸುರಂಗ ಲಕ್ಮಲ್ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಕ್ರೀಡಾಂಗಣಕ್ಕೆ ಇಳಿದಿದ್ದರು.

ಬೌಲರ್ ಗಾಮಗೆ ಅವರಿಗೆ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಕೆಮ್ಮು ಕಾಣಿಸಿಕೊಂಡಿತು. ಇದು ಪಂದ್ಯ ಸ್ಥಗಿತಗೊಳ್ಳಲು ಕಾರಣವಾಗಿತ್ತು.

ಲಂಕಾದ ಬೌಲರ್‌ಗಳು ವಾಯು ಮಾಲಿನ್ಯದ ಕಾರಣದಿಂದಾಗಿ ಫೀಲ್ಡಿಂಗ್ ವೇಳೆ ತೊಂದರೆ ಅನುಭವಿಸಿದರು. ಕೋಟ್ಲಾ ಮೈದಾನದಲ್ಲಿ ಮೋಡ ಕವಿದ ವಾತಾವರಣ ಇತ್ತು. ಸದೀರ ಸಮರವಿಕ್ರಮ ಶನಿವಾರ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಅವರು ಫೀಲ್ಡ್‌ಗೆ ಇಳಿಯಲಿಲ್ಲ. ಈ ಕಾರಣದಿಂದಾಗಿ ಲಂಕಾ 10 ಮಂದಿ ಮಾತ್ರ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಪಂದ್ಯ ಮತ್ತೆ ಆರಂಭಗೊಂಡಾಗ ಗಾಮಗೆ ಅವರು ಅಶ್ವಿನ್‌ಗೆ 122.4ನೇ ಓವರ್‌ನಲ್ಲಿ ಪೆವಿಲಿಯನ್ ಹಾದಿ ತೋರಿಸಿದರು.

 ಶ್ರೀಲಂಕಾ ತಂಡದ ಆಟಗಾರರು ಪದೇ ಪದೇ ವಾಯುಮಾಲಿನ್ಯದ ತಕರಾರು ಎತ್ತಿದರು. ನಾಯಕ ದಿನೇಶ್ ಚಾಂಡಿಮಾಲ್ ಪಂದ್ಯವನ್ನು ಬಹಿಷ್ಕರಿಸುವ ಭೀತಿಯನ್ನು ಉಂಟುಮಾಡಿದ್ದರು. ಲಂಕಾ ತಂಡದ ಅಗ್ರ ಬೌಲರ್‌ಗಳಾದ ಲಹಿರು ಗಾಮಗೆ ಮತ್ತು ಸುರಂಗ ಲಕ್ಮಲ್ ಅವರಿಗೆ ವಾಯು ಮಾಲಿನ್ಯ ಕಾರಣದಿಂದಾಗಿ ಬೌಲಿಂಗ್ ಮಾಡುವಾಗ ಸಮಸ್ಯೆ ಎದುರಿಸಿದರು. ಆಗ ಫೀಲ್ಡ್ ಅಂಪೈರ್‌ಗಳು ಉಭಯ ತಂಡಗಳ ನಾಯಕರು, ಮ್ಯಾನೇಜರ್ ಮತ್ತು ಕೋಚ್‌ಗಳನ್ನು ಕರೆಸಿ ಮಾತುಕತೆ ನಡೆಸಿದರು.

 127.5ನೇ ಓವರ್‌ನಲ್ಲಿ ಕೊಹ್ಲಿ ಅವರು ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಪ್ರಕಟಿಸಿದರು. ಆಗ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 9ರನ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ 5 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಕೊಹ್ಲಿ ಅವರ ಅನಿರೀಕ್ಷಿತ ನಿರ್ಧಾರ ಸಹಾ ಮತ್ತು ಜಡೇಜಗೆ ಅಚ್ಚರಿ ಮೂಡಿಸಿತ್ತು.

ಲಂಕಾದ ಸಂಡಕನ್ 167ಕ್ಕೆ 4 ವಿಕೆಟ್ , ಗಾಮಗೆ 95ಕ್ಕೆ 2 ವಿಕೆಟ್ ಮತ್ತು ಪೆರೇರಾ 145ಕ್ಕೆ 1 ವಿಕೆಟ್ ಪಡೆದರು.

ವಿರಾಟ್‌ಗೆ ಮಾಲಿನ್ಯ ಸಮಸ್ಯೆ ತಟ್ಟಲಿಲ್ಲ !

ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡು ದಿನಗಳ ಕಾಲ ಬ್ಯಾಟಿಂಗ್ ನಡೆಸಲು ಮಾಸ್ಕ್ ಧರಿಸಲಿಲ್ಲ. ಅವರಿಗೆ ತಟ್ಟದ ವಾಯುಮಾಲಿನ್ಯದ ಸಮಸ್ಯೆ ಅದು ಹೇಗೆ ಶ್ರೀಲಂಕಾದ ಆಟಗಾರರನ್ನು ಕಾಡಿತು ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಪ್ರಶ್ನಿಸಿದ್ದಾರೆ.

     ಕೊಹ್ಲಿ ಸುಮಾರು ಏಳೂವರೆ ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿ ಜೀವನಶ್ರೇಷ್ಠ 243 ರನ್ ಗಳಿಸಿದ್ದರು. ತವರಿನಲ್ಲಿ ಮೊದಲ ಬಾರಿ ಶತಕ, ದ್ವಿಶತಕ ಗಳಿಸಿದ್ದ ಕೊಹ್ಲಿ ತ್ರಿಶತಕವನ್ನು ದಾಖಲಿಸುವ ಕನಸು ಕಾಣುತ್ತಿದ್ದರು. ಆದರೆ ಪರಿಸ್ಥಿತಿ ಹೀಗಿರುವಾಗ ಶ್ರೀಲಂಕಾದ ಆಟಗಾರರು ವಾಯುಮಾಲಿನ್ಯದ ಬಗ್ಗೆ ತಕರಾರು ಉಂಟು ಮಾಡಿ ಅವರ ಆಟಕ್ಕೆ ಅಡ್ಡಿಪಡಿಸಿದರು ಎಂದು ಭರತ್ ಅರುಣ್ ಆರೋಪಿಸಿದ್ದಾರೆ.

ವಿರಾಟ್ ಕೊಹ್ಲಿ 536 ರನ್‌ಗಳಿಗೆ ಡಿಕ್ಲೇರ್ ಮಾಡುವ ಆಲೋಚನೆಯಲ್ಲಿ ಇರಲಿಲ್ಲ. ಆದರೆ ಲಂಕಾದ ಆಟಗಾರರ ವರ್ತನೆಯಿಂದಾಗಿ ಬಲವಂತಾಗಿ ಡಿಕ್ಲೇರ್ ಮಾಡಬೇಕಾಯಿತು ಎಂದು ಹೇಳಿರುವ ಭರತ್ ಅರುಣ್ ಲಂಕಾ ಆಟಗಾರರ ನೈಜತೆಯ ಬಗ್ಗೆ ಪ್ರಶ್ನಿಸಿದ್ದಾರೆ.

ಲಂಕಾದ ಆಟಗಾರಿಗೆ ಆರೋಗ್ಯ ಸಮಸ್ಯೆ

ಟೀಮ್ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್‌ನ ಎರಡನೇ ದಿನವಾಗಿರುವ ರವಿವಾರ ಶ್ರೀಲಂಕಾದ ಆಟಗಾರರು ವಾಯುಮಾಲಿನ್ಯ ಸಮಸ್ಯೆಯಿಂದಾಗಿ ವಾಂತಿ ಮಾಡಿದ್ದರು.

ಲಂಕಾದ ಆಟಗಾರರು ಫೀಲ್ಡಿಂಗ್ ಮುಗಿಸಿ ಬರುವಾಗ ವಾಂತಿ ಮಾಡಿದ್ದರು ಎಂದು ತಂಡದ ಕೋಚ್ ನಿಕ್ ಪೊಥಾಸ್ ಹೇಳಿದ್ದಾರೆ.

ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಆಟಗಾರರು ದೂರು ನೀಡಿದರು. ಆಗ ಅಂಪೈರ್ ಅವರು ಮ್ಯಾಚ್ ರೆಫರಿ ಮತ್ತು ತಂಡದ ವೈದ್ಯರೊಂದಿಗೆ ಮಾತುಕತೆ ನಡೆಸಿದರು ಎಂದು ಕೋಚ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News