ಚರಿತ್ರೆಯ ತಪ್ಪುಗಳಿಗೆ ವರ್ತಮಾನದಲ್ಲಿ ಪರಿಹಾರ ಸಿಗುವುದೇ?

Update: 2017-12-04 04:39 GMT

ಚರಿತ್ರೆಯ ತಪ್ಪುಗಳನ್ನು ಸರಿಪಡಿಸಲು ಹೊರಟರೆ, ಹಿಂದೆ ವಶಪಡಿಸಿಕೊಂಡ ಬೌದ್ಧ ವಿಹಾರಗಳನ್ನು ಮತ್ತು ಜೈನ ಬಸದಿಗಳನ್ನು ಜೈನರಿಗೆ ಬಿಟ್ಟುಕೊಡಬೇಕು. ಹೀಗೆ ಚರಿತ್ರೆಯ ತಪ್ಪುಗಳನ್ನು ಸರಿಪಡಿಸುತ್ತ ಹೋದರೆ, ಈ ಭಾರತ ಒಂದಾಗಿ ಉಳಿಯುವುದಿಲ್ಲ. ದ್ವೇಷ ಬೆಂಕಿಯನ್ನು ಆರಿಸಲು ಆಗುವುದಿಲ್ಲ. ಚರಿತ್ರೆಯಲ್ಲಿ ನಡೆದು ಹೋದ ಪ್ರಮಾದಗಳಿಗೆ ವರ್ತಮಾನದಲ್ಲಿ ಪರಿಹಾರ ಹುಡುಕುತ್ತ ಹೊರಟರೆ, ಈ ದೇಶ ಹುಚ್ಚಾಸ್ಪತ್ರೆ ಆಗುತ್ತದೆ. ಮತ್ತೊಮ್ಮೆ ಸಾಮ್ರಾಜ್ಯ ಶಾಹಿ ಆಕ್ರಮಣಕ್ಕೆ ಬಲಿಯಾಗುತ್ತದೆ. ಈಗ ಭಾರತದ ಮುಂದಿರುವ ಸವಾಲು, ಮಂದಿರ ನಿರ್ಮಾಣವಲ್ಲ. ಬಡತನ, ನಿರುದ್ಯೋಗ, ಹಸಿವು, ಅಸ್ಪಶ್ಯತೆ, ಅಸಮಾನತೆ ಗಳಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.


ಇತ್ತೀಚೆಗೆ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ಧರ್ಮ ಸಂಸದ್‌ನಲ್ಲಿ ಕೆಲವರು ಆಡಿದ ಮಾತುಗಳು ಹಾಗೂ ಕೈಗೊಂಡ ನಿರ್ಣಯಗಳನ್ನು ಗಮನಿಸಿದಾಗ 70ರ ದಶಕದಲ್ಲಿ ಇದೇ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ಸಮಾವೇಶದ ಸಂದರ್ಭದಲ್ಲಿ ನಡೆದ ಕೆಲ ವಿದ್ಯಮಾನಗಳು ನನಗೆ ನೆನಪಿಗೆ ಬಂದವು. ಆ ಸಮ್ಮೇಳನದ ನೇತೃತ್ವ ವಹಿಸಿದವರು ಇದೇ ಪೇಜಾವರ ವಿಶ್ವೇಶತೀರ್ಥರು. ಆಗ ತೊಗಾಡಿಯಾ ಇರಲಿಲ್ಲ. ಗೋಳ್ವಾಲ್ಕರ್ ಗುರೂಜಿ ಸಮ್ಮೇಳನಕ್ಕೆ ಬಂದಿದ್ದರು.

ಈ ಸಮಾವೇಶದ ಉದ್ಘಾಟನೆಗೆ ರಾಷ್ಟ್ರಕವಿ ಕುವೆಂಪು ಅವರನ್ನು ಆಹ್ವಾನಿಸ ಲಾಗಿತ್ತು. ಈ ಆಹ್ವಾನದ ಹಿಂದಿನ ಮರ್ಮವನ್ನು ಅರಿತ ಕುವೆಂಪು, ಆಹ್ವಾನವನ್ನು ತಿರಸ್ಕರಿಸಿದ್ದರು. ಅಷ್ಟೇ ಅಲ್ಲದೆ, ತಮ್ಮನ್ನು ಆಹ್ವಾನಿಸಿದ ಪೇಜಾವರರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದರು. ಅವರು ಕೇಳಿದ ಪ್ರಶ್ನೆಗೆ ಪೇಜಾವರರು ಮತ್ತು ಸಂಘ ಪರಿವಾರದಿಂದ ಈವರೆಗೆ ಉತ್ತರ ಬಂದಿಲ್ಲ.

70ರ ದಶಕದಲ್ಲಿ ತಮ್ಮನ್ನು ಆಹ್ವಾನಿಸಿದಾಗ ಕುವೆಂಪು ಕೇಳಿದ ಪ್ರಶ್ನೆಗಳು ಶ್ರೇಣೀಕೃತ ಜಾತಿ ಪದ್ಧತಿ ಕುರಿತು ಆಗಿದ್ದವು. ಒಂದನೆಯದಾಗಿ, ಶ್ರೇಣೀಕೃತ ಜಾತಿ ಪದ್ಧತಿ ತಿರಸ್ಕರಿಸುವಿರಾ? ಎರಡನೆಯದು, ಮನುಷ್ಯರಲ್ಲಿ ಮೇಲುಕೀಳಿನ ತಾರತಮ್ಯ ಹೇರುವ ಮನುಸ್ಮತಿಯನ್ನು ಧಿಕ್ಕರಿಸುವಿರಾ? ಮೂರನೆಯದಾಗಿ, ಉಡುಪಿ ಮಠಕ್ಕೆ ಶೂದ್ರ ರೊಬ್ಬರನ್ನು ಪೀಠಾಧಿಪತಿಯಾಗಿ ನೇಮಿಸುವಿರಾ ಎಂದು ಪ್ರಶ್ನಿಸಿದ್ದರು. ಇವುಗಳಿಗೆ ಉತ್ತರ ಬಾರದಿದ್ದಾಗ, ಈ ಆಹ್ವಾನ ತಿರಸ್ಕರಿಸಿದ್ದರು.

ಕುವೆಂಪು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಒತ್ತಟ್ಟಗಿರಲಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ ವಿಶ್ವ ಹಿಂದೂ ಪರಿಷತ್‌ಮುಂದೆ ಸಾಗಿದೆ. ಭಾರತದ ಜನತೆ ಚುನಾಯಿಸಿದ ಸಂಸತ್ತಿಗೆ ಪ್ರತಿಯಾಗಿ ಧರ್ಮ ಸಂಸದ್ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈ ಧರ್ಮ ಸಂಸದ್‌ನಲ್ಲಿ ಸಂವಿಧಾನ ಬದಲಿಸುವ ಮಾತು ಕೇಳುತ್ತಿದ್ದೇವೆ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಪೇಜಾವ ರರು ಹೇಳುತ್ತಿದ್ದಾರೆ. ರಾಮ ಮಂದಿರ ನಿರ್ಮಾಣ ಮಾತ್ರವಲ್ಲ, ಹಿಂದೂ ರಾಷ್ಟ್ರ ನಿರ್ಮಾಣ ತಮ್ಮ ಗುರಿಯೆಂದು ತೊಗಾಡಿಯಾ ಅಬ್ಬರಿಸಿದ್ದಾರೆ.

ಉಡುಪಿ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಸ್ವಾಮಿಯೊಬ್ಬರು ‘ಹಿಂದೂಗಳು ತಮ್ಮ ಜೇಬಿನಲ್ಲಿ ಮೊಬೈಲ್‌ಫೋನ್ ಬದಲು ಚಾಕು, ಚೂರಿ ಇಟ್ಟುಕೊಳ್ಳಬೇಕು’ ಎಂದು ಕರೆ ನೀಡಿದರು. ಮತಾಂತರ ತಡೆಯುವುದು ಮಾತ್ರವಲ್ಲ, ಘರ್ ವಾಪ್ಸಿ ಆಗಬೇಕೆಂದು ಮೋಹನ್ ಭಾಗವತ್ ಹೇಳಿದರು. ಇವರಿಂದ ಸ್ಫೂರ್ತಿ ಪಡೆದ ಬಿಜೆಪಿ ಸಂಸದರೊಬ್ಬರ ಪರವಾಗಿರುವ ಫೇಸ್‌ಬುಕ್ ಖಾತೆಯಲ್ಲಿ ಕಿತ್ತೂರು ಚೆನ್ನಮ್ಮ ಮತ್ತು ಒನಕೆ ಓಬವ್ವ ಕುರಿತು ಅವಹೇಳನದ ಕಾಮೆಂಟ್‌ಗಳು ಬಂದವು. ಹುಬ್ಬಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ, ಮಂಗೇಶ ಎಂಬ ಆರೆಸ್ಸೆಸ್ ಪ್ರಚಾರಕರೊಬ್ಬರು, ಮದರ್ ತೆರೇಸಾ ಅವರ ಬಗ್ಗೆ ಅತ್ಯಂತ ಕೆಟ್ಟ ಭಾಷೆಯಲ್ಲಿ ಟೀಕಿಸಿದರು.

ಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ಘರ್ ವಾಪ್ಸಿ, ಲವ್ ಜಿಹಾದ್ ಹೀಗೆ ಒಂದೊಂದಾಗಿ ಸಂಘ ಪರಿವಾರದ ಹಿಡನ್ ಅಜೆಂಡಾಗಳು ಹೊರಬರುತ್ತಿವೆ. ಅದನ್ನು ವಿರೋಧಿಸುವುದೇ ಪ್ರಗತಿಪರರ ನಿತ್ಯದ ಕೆಲಸವಾಗಿದೆ. ವಿರೋಧಿಸದೇ ಸುಮ್ಮನಿದ್ದ ಪರಿಣಾಮವಾಗಿ ಈ ಅಧಿಕಾರ ಸೂತ್ರವನ್ನು ಹಿಡಿದು ಸಂವಿಧಾನವನ್ನೇ ಬುಡ ಮೇಲು ಮಾಡುವ ಕೃತ್ಯಕ್ಕೆ ಕೈಹಾಕಿದೆ. ಇದನ್ನೆಲ್ಲ ಕಂಡು ಸುಮ್ಮನಿರಲು ಸಾಧ್ಯವಿಲ್ಲ. ಇದು ಬರೀ ಕೋಮುವಾದದ ಪ್ರಶ್ನೆಯಲ್ಲ. ಸಂಘ ಪರಿವಾರದ ಕೋಮು ವಾದದ ಅಂತರಾಳದಲ್ಲಿ ಮನುವಾದದ ಬೇರುಗಳಿವೆ. ಮಂದಿರ ನಿರ್ಮಾಣ ತೋರಿಕೆಗೆ ಮಾತ್ರ. ಅದರಾಚೆ ಈ ಸಂವಿಧಾನ ನಾಶ ಮಾಡಿ, ಪ್ರಜಾಪ್ರಭುತ್ವದ ಸಮಾಧಿ ಮೇಲೆ ಹಿಂದೂ ರಾಷ್ಟ್ರ ನಿರ್ಮಿಸುವ ದೀರ್ಘಕಾಲೀನ ಕಾರ್ಯಸೂಚಿ ಇದೆ. ಅಂತಲೇ ಪಂಡಿತ ಜವಾಹರಲಾಲ್ ನೆಹರೂ, ಕೋಮುವಾದ ಬಹು ಸಂಖ್ಯಾತರಿಂದ ಬರುವುದೆಂದು ಹೇಳಿದ್ದರು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರವನ್ನು ಎಂಟು ದಶಕಗಳ ಹಿಂದೆಯೇ ವಿರೋಧಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್, ‘ಭಾರತ ಒಂದು ವೇಳೆ ಹಿಂದೂ ರಾಷ್ಟ್ರವಾದರೆ, ನಾಶವಾಗುತ್ತದೆ’ ಎಂದು ಹೇಳಿದ್ದರು.

ಉಡುಪಿಯ ಧರ್ಮ ಸಂಸದ್‌ನಲ್ಲಿ ಅಯೋಧ್ಯೆಯ ರಾಮ ಮಂದಿರ ಬಗ್ಗೆ ಪ್ರಸ್ತಾಪಿಸಿದ್ದರೂ ಸಂಘ ಪರಿವಾರ ಅಷ್ಟ್ರಕ್ಕೆ ಸುಮ್ಮನೆ ಕೂರುವುದಿಲ್ಲ. ಭಾರತೀಯರನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲು ಅದು ಮಥುರಾ, ಕಾಶಿ ಎಂಬಂತಹ ಪ್ರಶ್ನೆಗಳನ್ನು ಕೆದಕುತ್ತದೆ. ಈ ರೀತಿ ದೇಶವ್ಯಾಪಿಯಾಗಿ ಮೂರು ಸಾವಿರ ಮಸೀದಿಗಳ ಪಟ್ಟಿಯನ್ನು ಅದು ತಯಾರಿಸಿದೆ. ಅವುಗಳನ್ನೆಲ್ಲ ಹಿಂದೂಗಳಿಗೆ ಬಿಟ್ಟು ಕೊಡಬೇಕೆಂಬುದು ಅದರ ಬೇಡಿಕೆಯಾಗಿದೆ. 16ನೇ ಶತಮಾನದಲ್ಲಿ ಬಾಬರ್‌ನು ಅಯೋಧ್ಯೆಯ ರಾಮ ಮಂದಿರ ಕೆಡವಿ, ಮಸೀದಿ ನಿರ್ಮಿಸಿದ. ಹೀಗೆ ನೂರಾರು ಮಂದಿರಗಳನ್ನು ನಾಶ ಮಾಡಿ, ಮಸೀದಿಗಳು ತಲೆಯೆತ್ತಿವೆ ಎಂದು ಸಂಘ ಪರಿವಾರ ಹೇಳುತ್ತಿದೆ. ಇದಕ್ಕಾಗಿ ತನ್ನದೇ ಇತಿಹಾಸಕಾರರಿಂದ ಪುರಾವೆಗಳನ್ನು ಒದಗಿಸುತ್ತದೆ. ತಾಜ್ ಮಹಲ್ ತೇಜೋಮಹಲ್ ಆಗಿತ್ತೆಂದು ಹೇಳುತ್ತದೆ.

ಈ ರೀತಿಯ ಚರಿತ್ರೆಯ ಗೋರಿಗಳನ್ನು ಕೆದಕಲು ಹೊರಟವರು ಇನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ. ಶಂಕರಾಚಾರ್ಯರ ಕಾಲದಲ್ಲಿ ಸಾವಿರಾರು ಬೌದ್ಧ ವಿಹಾರ, ಜೈನ ಬಸದಿಗಳನ್ನು ಮತ್ತು ಜಿನಾಲಯಗಳನ್ನು ಧ್ವಂಸ ಗೊಳಿಸಲಾಯಿತು. ಇದಕ್ಕೆ ಯಾರು ಹೊಣೆ? ಈಗ ಹಿಂದೂ ಮಂದಿರಗಳಾಗಿ ಪರಿ ವರ್ತನೆಯಾಗಿರುವ ಇವುಗಳನ್ನು ಬೌದ್ಧರಿಗೆ ಮತ್ತು ಜೈನರಿಗೆ ಬಿಟ್ಟ ಕೊಡುವರೇ?

ಇದಕ್ಕೆ ಒಂದಲ್ಲ, ನೂರಾರು ದಾಖಲೆಗಳನ್ನು ನೀಡಬಹುದು. ಕ್ರಿ.ಶ.6ನೇ ಶತಮಾನದಲ್ಲಿ ಬೌದ್ಧಗಯಾದಲ್ಲಿದ್ದ ಬೌದ್ಧ ವಿಹಾರವನ್ನು ಶಶಂಕಾ ಎಂಬ ಹಿಂದೂ ರಾಜ ಕೆಡವಿ, ಅಲ್ಲಿ ಹಿಂದೂ ದೇಗುಲವನ್ನು ನಿರ್ಮಿಸಿದ. ಏಳನೇ ಶತಮಾನದಲ್ಲಿ ಪಲ್ಲವ ಎಂಬ ರಾಜನು ತಮಿಳುನಾಡಿನ ತಿರುಪತಿರಿಪುಲ್ಲಿ (ಈಗಿನ ಕಡಲೂರು) ಎಂಬಲ್ಲಿ ಜೈನ ಬಸದಿಯನ್ನು ನೆಲಸಮಗೊಳಿಸಿ, ಅಲ್ಲಿನ ವಸ್ತುಗಳನ್ನು ಶಿವ ದೇವಾಲಯಕ್ಕೆ ಉಪಯೋಗಿಸಿದ. ತಿರುಪತಿ ದೇವಾಲಯ ಹಿಂದೆ ನೇಮಿನಾಥ ಬಸದಿಯಾಗಿರಲಿಲ್ಲವೇ? ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯ ಪದ್ಮಾವತಿಯ ತಾಣವಾಗಿರಲಿಲ್ಲವೇ? ಈಗಿನ ಶೈವ ಮತ್ತು ವಿಷ್ಣು ದೇವಾಲಯಗಳು ಒಂದು ಕಾಲದಲ್ಲಿ ಜೈನರ ಪವಿತ್ರ ಸ್ಥಳಗಳಾಗಿದ್ದವು. ಶೃಂಗೇರಿಯ ವಿದ್ಯಾಶಂಕರ ದೇವಾಲಯ ಬೌದ್ಧ ವಿಹಾರವಾಗಿತ್ತು. ಉಡುಪಿ ಕೃಷ್ಣ ಮಠದ ಎದುರಿರುವ ಚಂದ್ರವೌಳೇಶ್ವರ ದೇವಾಲಯ ಚಂದ್ರನಾಥ ಬಸದಿಯಾಗಿತ್ತು. ಇವುಗಳನ್ನೆಲ್ಲ, ಜೈನರು ಮತ್ತು ಬೌದ್ಧರಿಗೆ ವಾಪಸ್ ಕೊಡಿಸಲು ಪೇಜಾವರರು ಮುಂದಾಗುವರೇ?

ಶಂಕರಾಚಾರ್ಯರ ಕಾಲದಲ್ಲಿ ಜೈನ ಧರ್ಮವನ್ನು ವ್ಯವಸ್ಥಿತವಾಗಿ ನಾಶಪ ಡಿಸಲಾಯಿತು. ಜೈನ ತೀರ್ಥಂಕರರ ಮೂರ್ತಿಗಳನ್ನೆಲ್ಲ ಭಗ್ನಗೊಳಿಸಲಾಯಿತು. ಉಳಿದ ವಿಗ್ರಹಗಳಾದರೂ ಸುರಕ್ಷಿತವಾಗಿರಲಿ ಎಂದು ಜೈನರು ಅವುಗಳನ್ನು ಭೂಮಿಯೊಳಗೆ ಹುಗಿದು ಇಟ್ಟರು. ಈಗಲೂ ಕೂಡ ಭೂಮಿ ಅಗೆಯುವಾಗ, ಅನೇಕ ಕಡೆ ಇಂತಹ ಜೈನ ವಿಗ್ರಹಗಳು ಸಿಗುತ್ತವೆ. ಇತ್ತೀಚೆಗೆ, ಅಥಣಿ ತಾಲೂಕಿನ ತೆಲಸಂಗದಲ್ಲಿ ನಮ್ಮ ಮಾವನ ಮನೆಯ ಬಳಿ ತೀರ್ಥಂಕರ ವಿಗ್ರಹ ದೊರೆತಿದ್ದು, ಕಣ್ಣಾರೆ ನೋಡಿದ್ದೇನೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಮೊದಲು ಶಂಕರಾಚಾರ್ಯರ ಕಾಲದಲ್ಲಿ ನಾಶ ಮಾಡಲಾದ ಬೌದ್ಧ ವಿಹಾರ ಮತ್ತು ಜೈನ ಬಸದಿಗಳನ್ನು ಜೈನರಿಗೆ ಮತ್ತು ಬೌದ್ಧರಿಗೆ ವಾಪಸ್ ಬಿಟ್ಟುಕೊಡಲಿ. ಜೈನರು ಮತ್ತು ಬೌದ್ಧರು ಕೂಡ ಇಂತಹ ನೆಲಸಮಗೊಂಡ ಬೌದ್ಧವಿಹಾರ, ಜೈನ ಬಸದಿಗಳ ಪಟ್ಟಿ ನೀಡುತ್ತಾರೆ. ಚರಿತ್ರೆಯ ತಪ್ಪುಗಳನ್ನು ಸರಿಪಡಿಸಲು ಹೊರಟರೆ, ಹಿಂದೆ ವಶಪಡಿಸಿಕೊಂಡ ಬೌದ್ಧ ವಿಹಾರಗಳನ್ನು ಮತ್ತು ಜೈನ ಬಸದಿಗಳನ್ನು ಜೈನರಿಗೆ ಬಿಟ್ಟುಕೊಡಬೇಕು. ಹೀಗೆ ಚರಿತ್ರೆಯ ತಪ್ಪುಗಳನ್ನು ಸರಿಪಡಿಸುತ್ತ ಹೋದರೆ, ಈ ಭಾರತ ಒಂದಾಗಿ ಉಳಿಯುವುದಿಲ್ಲ. ದ್ವೇಷ ಬೆಂಕಿಯನ್ನು ಆರಿಸಲು ಆಗುವುದಿಲ್ಲ.

ಚರಿತ್ರೆಯಲ್ಲಿ ನಡೆದು ಹೋದ ಪ್ರಮಾದಗಳಿಗೆ ವರ್ತಮಾನದಲ್ಲಿ ಪರಿಹಾರ ಹುಡುಕುತ್ತ ಹೊರಟರೆ, ಈ ದೇಶ ಹುಚ್ಚಾಸ್ಪತ್ರೆ ಆಗುತ್ತದೆ. ಮತ್ತೊಮ್ಮೆ ಸಾಮ್ರಾಜ್ಯ ಶಾಹಿ ಆಕ್ರಮಣಕ್ಕೆ ಬಲಿಯಾಗುತ್ತದೆ. ಈಗ ಭಾರತದ ಮುಂದಿರುವ ಸವಾಲು, ಮಂದಿರ ನಿರ್ಮಾಣವಲ್ಲ. ಬಡತನ, ನಿರುದ್ಯೋಗ, ಹಸಿವು, ಅಸ್ಪಶ್ಯತೆ, ಅಸಮಾನತೆ ಗಳಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News