ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿ: ಟೀಮ್ ಇಂಡಿಯಾ ಪ್ರಕಟ

Update: 2017-12-04 18:16 GMT

ಹೊಸದಿಲ್ಲಿ, ಡಿ.4: ಎಂಎಸ್‌ಕೆ ಪ್ರಸಾದ್ ಅಧ್ಯಕ್ಷತೆಯ ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ ದಕ್ಷಿಣ ಆಫ್ರಿಕ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ.

17 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸಲಿದ್ದು, ಅಜಿಂಕ್ಯ ರಹಾನೆ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್‌ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

  ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಆಯ್ಕೆಗಾರರು ಐವರು ವೇಗಿಗಳಿಗೆ ಆದ್ಯತೆ ನೀಡಿದ್ದಾರೆ. ಭಾರತ ಜ.2 ರಿಂದ 28ರ ತನಕ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯನ್ನು ಆಡುವ ಮೂಲಕ ಹೊಸ ವರ್ಷವನ್ನು ಆರಂಭಿಸಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವೆ ಮೂರು ಟೆಸ್ಟ್ ಪಂದ್ಯಗಳು ಕೇಪ್‌ಟೌನ್(ಜ.5-9), ಸೆಂಚೂರಿಯನ್(ಜ.13-17) ಹಾಗೂ ಜೋಹಾನ್ಸ್ ಬರ್ಗ್‌ನಲ್ಲ್ಲಿ(ಜ.24-28)ನಡೆಯಲಿದೆ.

ಭಾರತ 2013-14ರಲ್ಲಿ ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಂಡಿದ್ದಾಗ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 0-1 ರಿಂದ ಸೋತಿತ್ತು.

ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ಉಪ ನಾಯಕ), ರೋಹಿತ್ ಶರ್ಮ, ವೃದ್ಧಿಮಾನ್ ಸಹಾ, ಆರ್.ಅಶ್ವಿನ್, ರವೀಂದ್ರ ಜಡೇಜ, ಪಾರ್ಥಿವ್ ಪಟೇಲ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ.

ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿ: ಸುಂದರ್‌ಗೆ ಸ್ಥಾನ, ಕೊಹ್ಲಿಗೆ ವಿಶ್ರಾಂತಿ

ಇದೇ ವೇಳೆ ಆಯ್ಕೆ ಸಮಿತಿಯು ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಗೆ ತಂಡವನ್ನು ಆಯ್ಕೆ ಮಾಡಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ಪಡೆದಿರುವ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಸರಣಿ ಯಿಂದಲೂ ಹೊರಗುಳಿದಿದ್ದಾರೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ಸೀಮಿತ ಓವರ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಟ್ವೆಂಟಿ-20 ತಂಡದಲ್ಲಿ ಹೊಸ ಮುಖಗಳಾದ ತಮಿಳುನಾಡಿನ 18ರ ಹರೆಯದ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್, ಬರೋಡಾ ಬ್ಯಾಟ್ಸ್ ಮನ್ ದೀಪಕ್ ಹೂಡಾ ಹಾಗೂ ಕೇರಳದ ವೇಗಿ ಬಾಸಿಲ್ ಥಾಂಪಿ ಮೊದಲ ಬಾರಿ ಅವಕಾಶ ಪಡೆದಿದ್ದಾರೆ.

2016ರ ಜೂನ್‌ನಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಸೌರಾಷ್ಟ್ರ ವೇಗದ ಬೌಲರ್ ಜಯದೇವ್ ಉನದ್ಕಟ್ ಈ ವರ್ಷಾರಂಭದಲ್ಲಿ ಐಪಿಎಲ್‌ನಲ್ಲಿ ನೀಡಿರುವ ಉತ್ತಮ ಪ್ರದರ್ಶನವನ್ನು ಆಧರಿಸಿ ತಂಡಕ್ಕೆ ವಾಪಸಾಗಿದ್ದಾರೆ.

ಟ್ವೆಂಟಿ-20 ತಂಡ:

ರೋಹಿತ್ ಶರ್ಮ(ನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಡಬ್ಲು. ಸುಂದರ್, ಯಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ದೀಪಕ್ ಹೂಡ, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಬಾಸಿಲ್ ಥಾಂಪಿ, ಜಯದೇವ್ ಉನದ್ಕಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News