ಸಚಿವ ಖಾದರ್ ರಿಂದ ಅನ್ನಭಾಗ್ಯ ಯೋಜನೆಯ ರಿಯಾಲಿಟಿ ಚೆಕ್

Update: 2017-12-05 08:39 GMT

ವಿಟ್ಲ, ಡಿ.5: ಅನ್ನಭಾಗ್ಯ ಯೋಜನೆಯಲ್ಲಿ ವಯೋವೃದ್ಧರೊಬ್ಬರ ಕುಟುಂಬಕ್ಕೆ ಕೇವಲ 8 ಕೆ.ಜಿ. ಅಕ್ಕಿ ಸಿಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸ್ವತಃ ಫಲಾನುಭವಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ವಿಟ್ಲ ಸಮೀಪದ ಅನಿಲಕಟ್ಟೆ ಎಂಬಲ್ಲಿಗೆ ಸೋಮವಾರ ಭೇಟಿ ನೀಡಿದ್ದ ಯು.ಟಿ. ಖಾದರ್ ಅಲ್ಲಿಂದ ಹಿಂದಿರುಗುತ್ತಿದ್ದಾಗ ದಾರಿ ಮಧ್ಯೆ ತುಕ್ರ ನಲಿಕೆ ಎಂಬವರು ಸಿಕ್ಕಿದ್ದು ಅವರ ಬಳಿ ಸಚಿವ ಖಾದರ್ ಮಾತನಾಡಿದರು. ಈ ಸಂದರ್ಭ ಸಚಿವರು ಸಿದ್ದರಾಮಯ್ಯರ ಅನ್ನಭಾಗ್ಯದ 14 ಕೆ.ಜಿ. ಅಕ್ಕಿ ಸಿಗುತ್ತದೆಯೇ ಎಂದು ಪ್ರಶ್ನಿಸಿದ್ದು, "8 ಕೆ.ಜಿ. ಅಕ್ಕಿ ಸಿಗುತ್ತಿದೆ" ಎಂದು ತುಕ್ರ ನಲಿಕೆ ಉತ್ತರಿಸಿದರು.

ತಕ್ಷಣ ಈ ಬಗ್ಗೆ ಸ್ಪಂದಿಸಿದ ಸಚಿವ ಖಾದರ್ ತುಕ್ರ ನಲಿಕೆಯವರನ್ನು ತನ್ನ ಕಾರಲ್ಲಿ ಕುಳ್ಳಿರಿಸಿ ವಿಟ್ಲ ಪಡ್ನೂರು ಗ್ರಾಮದ ಕಡಂಬು ಕಾಲನಿಯಲ್ಲಿರುವ ಮನೆಗೆ ಹೋಗಿ ಪಡಿತರ ಚೀಟಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ತುಕ್ರ ನಲಿಕೆ ಮತ್ತು ಅವರ ಪುತ್ರಿ ಸುಶೀಲಾ ಮಾತ್ರ ಇದ್ದು, "ನಿಮಗೆ ಎಷ್ಟು ಕೆ.ಜಿ. ಅಕ್ಕಿ ಸಿಗುತ್ತಿದೆ" ಎಂದು ಖಾದರ್ ಸುಶೀಲಾರಲ್ಲಿ ಪ್ರಶ್ನಿಸಿದ್ದು, ಸುಶೀಲಾ "ನಮಗೆ 14 ಕೆ.ಜಿ. ಅಕ್ಕಿ ಸಿಗುತ್ತದೆ" ಎಂದು ಉತ್ತರಿಸಿದರು.

85 ವರ್ಷದ ತುಕ್ರ ನಲಿಕೆಯವರಿಗೆ ಈ ಬಗ್ಗೆ ಅರಿವಿಲ್ಲದೆ ಇರುವುದರಿಂದ 8 ಕೆ.ಜಿ. ಅಕ್ಕಿ ಸಿಗುತ್ತಿದೆ ಎಂದು ಹೇಳಿದ್ದರೂ, ತಕ್ಷಣ ಸ್ಪಂದಿಸಿ ಮನೆಗೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಿದ ಸಚಿವ ಖಾದರ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಸಂದರ್ಭ ಸಚಿವರ ಜೊತೆ ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ, ಬರಹಗಾರ ಅಬೂಬಕರ್ ಅನಿಲಕಟ್ಟೆ, ಮನ್ಸೂರ್ ಹಾನೆಸ್ಟ್, ಇಸ್ಮಾಯಿಲ್ ಮುಸ್ಲಿಯಾರ್ ಸೇರಾಜೆ, ಇಸ್ಮಾಯಿಲ್ ಹಾಜಿ ಅಡ್ಡದಬೀದಿ, ಲಿಬ್ ಝತ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News