ನ್ಯಾ.ಕರ್ಣನ್ ಬಿಡುಗಡೆ ಕೋರಿದ್ದ ಅರ್ಜಿ ಮದ್ರಾಸ್ ಹೈಕೋರ್ಟ್‌ನಲ್ಲಿ ತಿರಸ್ಕೃತ

Update: 2017-12-05 15:36 GMT

ಚೆನ್ನೈ,ಡಿ.5: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೋಲ್ಕತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ನ್ಯಾ.(ನಿವೃತ್ತ) ಸಿ.ಎಸ್.ಕರ್ಣನ್ ಅವರನ್ನು ತಕ್ಷಣ ಬಿಡುಗಡೆಗೊಳಿಸಲು ರಾಷ್ಟ್ರಪತಿಗಳಿಗೆ ನಿರ್ದೇಶ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಕರ್ಣನ್ ದಲಿತರಾಗಿರುವುದರಿಂದ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಅರ್ಜಿದಾರರಾದ ದಿಲ್ಲಿಯ ಡಾ.ಅಂಬೇಡ್ಕರ್ ಶೈಕ್ಷಣಿಕ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಎ.ಪಿ.ಗೌತಮ ಸಿದ್ಧಾರ್ಥ ಅವರು ಪ್ರತಿಪಾದಿಸಿದ್ದರು.

ನ್ಯಾ.ಕರ್ಣನ್ ಅವರ ಬಂಧನಕ್ಕೆ ಕಾರಣವಾಗಿದ್ದ ಸಂದರ್ಭಗಳನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಮತ್ತು ನ್ಯಾ.ಆರ್. ಹೇಮಲತಾ ಅವರ ಪೀಠವು, ಈ ಪ್ರಕರಣವು ಮದ್ರಾಸ್ ಉಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲ, ಆದ್ದರಿಂದ ಅರ್ಜಿಯನ್ನು ವಜಾಗೊಳಿಸ ಲಾಗಿದೆ ಎಂದು ತಿಳಿಸಿತು.

ಬಂಧನದ ಸಮಯದಲ್ಲಿ ನ್ಯಾ.ಕರ್ಣನ್ ಅವರು ಯಾವುದೇ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರಲಿಲ್ಲ. ಅರ್ಜಿಯಲ್ಲಿನ ಪ್ರತಿವಾದಿಗಳು ದಿಲ್ಲಿಯಲ್ಲಿದ್ದಾರೆ, ಹೀಗಾಗಿ ಈ ವಿಷಯದಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.

ಕೋಲ್ಕತಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳುವ ಮುನ್ನ ನ್ಯಾ.ಕರ್ಣನ್ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದರು. ಜೂನ್ 9ರಂದು ಅವರು ಸೇವೆಯಿಂದ ನಿವೃತ್ತರಾಗಿದ್ದು, ಜೂ.20ರಂದು ಅವರನ್ನು ಬಂಧಿಸಲಾಗಿತ್ತು. ಮೇ 9ರಂದು ನ್ಯಾಯಾಂಗ ನಿಂದನೆ ಆರೋಪದಲ್ಲಿ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಆರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News