ಗುಜರಾತ್ ಸಮೀಪಿಸಿದ ‘ಒಖಿ’ ಚಂಡಮಾರುತ, ಭಾರೀ ಮಳೆ

Update: 2017-12-05 15:39 GMT

ಮುಂಬೈ, ಡಿ.5: ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪಕ್ಕೆ ಪ್ರಳಯಾಂತಕನಂತೆ ಎರಗಿ ಭಾರೀ ನಾಶ ಉಂಟು ಮಾಡಿದ್ದ ಒಖಿ ಚಂಡಮಾರುತ ಗುಜರಾತ್ ಸಮೀಪಿಸುತ್ತಿದ್ದು, ಮಂಗಳವಾರ ರಾತ್ರಿಯಿಂದ ಗುಜರಾತ್ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ.

   ಭಾರೀ ಮಳೆ ಸುರಿಯುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುಂಬೈ ಸಿಂಧುದುರ್ಗ, ಥಾಣೆ, ರಾಯ್‌ಗಢ ಮತ್ತು ಪಲ್‌ಘಾರ್ ಜಿಲ್ಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಮಹಾರಾಷ್ಟ್ರದ ಸಚಿವ ವಿನೋದ್ ಟಾವ್ಡೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

 ಮುಂಬೈ-ಪುಣೆ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಭಾರೀ ಆಲಿಕಲ್ಲು ಮಳೆಯಾದ ಕಾರಣ ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಕೆಲವೆಡೆ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಪಶ್ಚಿಮ ರೈಲ್ವೇ ತಿಳಿಸಿದೆ.

 ದಕ್ಷಿಣ ಗುಜರಾತ್‌ನಲ್ಲಿ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಂಡಮಾರುತ ಪೀಡಿತ ಪ್ರದೇಶದ ಜನರು ಮತ್ತು ಸಂತ್ರಸ್ತರಾದವರು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಬೇಕಾದ ಸರ್ವ ಸಿದ್ಧತೆ ನಡೆಸುವಂತೆ ಗುಜರಾತ್ ಚುನಾವಣಾಧಿಕಾರಿಗೆ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ. ಸೋಮವಾರ ಕಡಲಿಗೆ ಇಳಿದಿದ್ದ 13,000 ಮೀನುಗಾರಿಕಾ ದೋಣಿಗಳನ್ನು ಮರಳಿ ದಡ ಸೇರುವಂತೆ ಸೂಚಿಸಲಾಗಿದೆ . ಚಂಡಮಾರುತದ ಕಾರಣ ಗೋವಾದಲ್ಲಿ ಸಮುದ್ರದ ನೀರಿನ ಮಟ್ಟ ಏಕಾಏಕಿ ಏರಿದ ಕಾರಣ 12 ಬೀಚ್‌ಗಳಿಗೆ ಹಾನಿಯಾಗಿದೆ.

ಪ್ರತಿಕೂಲ ಪರಿಸ್ಥಿತಿಯ ಕಾರಣ ಗುಜರಾತ್ ಸಮುದ್ರ ತೀರ ತಲುಪುವ ಮೊದಲೇ ಚಂಡಮಾರುತ ಕ್ಷೀಣಗೊಳ್ಳುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯೊಂದು ತಿಳಿಸಿದೆ. ಈ ಮಧ್ಯೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಧಾನಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 5 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ತಮಿಳುನಾಡು ಸರಕಾರಕ್ಕೆ ಹೈಕೋರ್ಟ್ ಸೂಚನೆ

ಕನ್ಯಾಕುಮಾರಿಯಲ್ಲಿ ‘ಒಖಿ’ ಚಂಡಮಾರುತದ ಹಾವಳಿಯಿಂದ ಸಂತ್ರಸ್ತರಾದವರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ತಮಿಳುನಾಡು ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

 ನೆರೆ ಪರಿಹಾರ ಶಿಬಿರದಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಸಾಕಷ್ಟು ಔಷಧಿ, ವಿದ್ಯುಚ್ಚಕ್ತಿ ಸೌಲಭ್ಯ, ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಹೈಕೋರ್ಟ್‌ನ ನ್ಯಾಯಪೀಠವು ರಾಜ್ಯ ಸರಕಾರದ ಅಧಿಕಾರಿಗಳಿಗೆ ಸೂಚಿಸಿದೆ.

ಚಂಡಮಾರುತದಿಂದ ತಮಿಳುನಾಡು ಮತ್ತು ಕೇರಳದಲ್ಲಿ 39 ಜನ ಮೃತಪಟ್ಟಿದ್ದು 167 ಮೀನುಗಾರರು ನಾಪತ್ತೆಯಾಗಿದ್ದಾರೆ. ಇದರಲ್ಲಿ ತಮಿಳುನಾಡಿನಲ್ಲಿ 10 ಮತ್ತು ಕೇರಳದಲ್ಲಿ 29 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾದವರ ನಿಖರ ಸಂಖ್ಯೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಖಾಸಗಿ ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ 74 ಮತ್ತು ಕೇರಳದಲ್ಲಿ 93 ಮೀನುಗಾರರು ನಾಪತ್ತೆಯಾಗಿದ್ದಾರೆ . ಒಟ್ಟು 556 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಜಿಂದಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News