ಕುಷ್ಟರೋಗಿಗಳ ಬಗ್ಗೆ ತಾರತಮ್ಯ ತೋರುವ ಕಾಯ್ದೆಗಳ ರದ್ದತಿ ಕೋರಿ ಅರ್ಜಿ

Update: 2017-12-05 16:46 GMT

ಹೊಸದಿಲ್ಲಿ, ಡಿ.5: ಕುಷ್ಟರೋಗಿಗಳ ಬಗ್ಗೆ ತಾರತಮ್ಯ ತೋರುತ್ತಿರುವ 119 ಕಾಯ್ದೆಗಳನ್ನು ರದ್ದುಮಾಡಬೇಕೆಂದು ಕೋರಿ ‘ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ’ ಎಂಬ ದಿಲ್ಲಿ ಮೂಲದ ಚಿಂತಕರ ಚಾವಡಿಯೊಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಿದೆ.

ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಸುಪ್ರೀಂಕೋರ್ಟ್, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.

ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಯಲ್ಲಿ ಕುಷ್ಟರೋಗವನ್ನು ವಿಚ್ಛೇದನ ಪಡೆಯಲು ಸೂಕ್ತ ಕಾರಣ ಎಂದು ಪರಿಗಣಿಸಲಾಗಿದೆ. ಇಂತಹ ಇನ್ನೂ ಹಲವು ಕಾನೂನುಗಳು ಮಾನವನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಕಾರಣ ಇವನ್ನು ರದ್ದುಗೊಳಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ. ಅಲ್ಲದೆ ಆಂಧ್ರಪ್ರದೇಶ ಭಿಕ್ಷಾಟನೆ ಪ್ರತಿಬಂಧ ಕಾಯ್ದೆ, ಬಾಂಬೆ ಭಿಕ್ಷಾಟನೆ ಪ್ರತಿಬಂಧ ಕಾಯ್ದೆ, ಗುಜರಾತ್ ಭಿಕ್ಷಾಟನೆ ಪ್ರತಿಬಂಧ ಕಾಯ್ದೆಗಳಡಿ , ಕುಷ್ಟರೋಗ ಬಾಧಿತ ಭಿಕ್ಷುಕರನ್ನು ಬಂಧಿಸಿ ಕುಷ್ಟರೋಗಿಗಳ ಚಿಕಿತ್ಸಾಲಯಕ್ಕೆ ದಾಖಲಿಸಲು ಅವಕಾಶವಿದೆ. ಒಡಿಶಾ, ಆಂಧ್ರಪ್ರದೇಶ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಇತರ ರಾಜ್ಯಗಳ ನಗರಪಾಲಿಕೆ ಮತ್ತು ಪಂಚಾಯತ್‌ರಾಜ್ ಕಾನೂನಿನ ಅನ್ವಯ ಕುಷ್ಟರೋಗ ಬಾಧಿತ ವ್ಯಕ್ತಿಗಳು ಪೌರಾಡಳಿತ ಸಂಸ್ಥೆಗೆ ನೇಮಕವಾಗುವಂತಿಲ್ಲ ಅಥವಾ ಸ್ಪರ್ಧಿಸುವಂತಿಲ್ಲ.

 ರೈಲ್ವೇಸ್ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆಯ ಅನ್ವಯ ಕುಷ್ಟರೋಗ ಬಾಧಿತರು ರೈಲಿನಲ್ಲಿ ಪ್ರಯಾಣಿಸದಂತೆ ಅಥವಾ ವಾಹನ ಚಾಲನಾ ಪರವಾನಿಗೆ ಪಡೆಯದಂತೆ ಪ್ರತಿಬಂಧಿಸಬಹುದಾಗಿದೆ ಎಂದು ಸಂಸ್ಥೆಯು ಕೆಲವು ಕಾಯ್ದೆಗಳ ಉದಾಹರಣೆ ನೀಡಿದೆ.

 ಭಾರತದಲ್ಲಿ ಕುಷ್ಟರೋಗಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಈ ರೋಗದ ವಿರುದ್ಧದ ಹೋರಾಟ ಇನ್ನೂ ಮುಂದುವರಿದಿದೆ. ವಿಶ್ವದ ಶೇ.60ರಷ್ಟು ಕುಷ್ಟರೋಗಿಗಳು ಭಾರತದಲ್ಲಿದ್ದು 2014-15ರಲ್ಲಿ ದೇಶದಾದ್ಯಂತ ಹೊಸದಾಗಿ 1.25 ಲಕ್ಷ ಕುಷ್ಟರೋಗ ಪ್ರಕರಣ ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News